ಮೂಡಿಗೆರೆ: ಕಳಸದ ಕಳಸೇಶ್ವರ ಸ್ವಾಮಿ ದೇವಾಲಯದಲ್ಲಿ ಇಂದಿನಿಂದ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಆದರೆ ಹೊರನಾಡು ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ ದೇವರ ದರ್ಶನಕ್ಕೆ ಅವಕಾಶ ನೀಡಲಾಗಿರಲಿಲ್ಲ.
ಮುಜರಾಯಿ ಇಲಾಖೆಯ ಅಧೀನದಲ್ಲಿರುವ ಕಳಸದ ಶ್ರೀ ಹೊರನಾಡು ಕಳಸೇಶ್ವರ ದೇವಸ್ಥಾನದಲ್ಲಿ ಸರ್ಕಾರ ನೀಡಿರುವ ನಿಯಮಾವಳಿಗಳಂತೆ ದೇವಸ್ಥಾನದ ಸುತ್ತಮುತ್ತಲು ಸ್ವಚ್ಛತೆ ಮಾಡಿ ಸ್ಯಾನಿಟೈಸರ್ ಸ್ಪ್ರೇ ಮಾಡಲಾಗಿದೆ. ದೇವಸ್ಥಾನಕ್ಕೆ ಬರುವ ಭಕ್ತರಿಗೆ ಸರತಿ ಸಾಲಿನಲ್ಲಿ ಬರುವಂತೆ ಸೂಚಿಸಲಾಗಿತ್ತು. ಥರ್ಮಲ್ ಸ್ಕ್ರೀನಿಂಗ್ ಜೊತೆಗೆ ಭಕ್ತಾದಿಗಳು ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ಸೂಚಿಸಲಾಗಿತ್ತು. ಆಗಮನ ಮತ್ತು ನಿರ್ಗಮನಕ್ಕೆ ಪ್ರತ್ಯೇಕ ವ್ಯವಸ್ಥೆಗಳನ್ನು ಮಾಡಲಾಗಿತ್ತು. ಯಾವುದೇ ರೀತಿಯ ತೀರ್ಥ, ಪ್ರಸಾದಗಳಿಗೆ ಅವಕಾಶ ಇರಲಿಲ್ಲ. ಊಟದ ವ್ಯವಸ್ಥೆಯನ್ನು ಸಹ ಸರ್ಕಾರದ ಮುಂದಿನ ಸೂಚನೆಗಳಿಗೆ ಅನುಗುಣವಾಗಿ ಕಾಯ್ದಿರಿಸಲಾಗಿದೆ. ಒಟ್ಟಾರೆ ಕೊರೋನಾ ಸೋಂಕು ತಮ್ಮ ನೆಚ್ಚಿನ ದೈವದ ದರ್ಶನಕ್ಕೆ ತೊಡಕು ಉಂಟುಮಾಡಿದುದಕ್ಕಾಗಿ ಭಕ್ತಾದಿಗಳು ಮನಸ್ಸಿನಲ್ಲಿಯೇ ಬೈದುಕೊಂಡು ಸಾಗುತ್ತಿದ್ದುದು ಕಂಡು ಬರುತ್ತಿತ್ತು.










