ಮೂಡಿಗೆರೆ : ತೋಟಗಾರಿಕಾ ಬೆಳೆಗಳಿಗೆ ತಗುಲುವ ಶಿಲೀಂದ್ರ ರೋಗಗಳನ್ನು ತಡೆಗಟ್ಟಲು ಬೋರ್ಡೋ ದ್ರಾವಣ ಸಿಂಪಡನೆ…

531
firstsuddi

ಮೂಡಿಗೆರೆ: ತೋಟಗಾರಿಕಾ ಬೆಳೆಗಳಿಗೆ ಪ್ರತೀ ಮಳೆಗಾಲದಲ್ಲಿ ತಗುಲುವ ಶಿಲೀಂದ್ರ ರೋಗಗಳನ್ನು ಮುಂಜಾಗ್ರತೆಯಿಂದ ತಡೆಗಟ್ಟಲು ಬೋರ್ಡೋ ದ್ರಾವಣವನ್ನು ಸಿಂಪಡಿಸಲಾಗುತ್ತದೆ. ಈ ನಿಟ್ಟಿನಲ್ಲಿ ಮೂಡಿಗೆರೆ ಕೃಷಿ ವಿಜ್ಞಾನ ಕೇಂದ್ರ ರೈತರ ಉಪಯೋಗಕ್ಕಾಗಿ ವೈಜ್ಞಾನಿಕವಾಗಿ ದ್ರಾವಣ ತಯಾರಿಸುವುದರ ಬಗ್ಗೆ ರೈತರುಗಳಿಗೆ ಮಾಹಿತಿ ನೀಡಿದೆ.
ಬೋರ್ಡೋ ದ್ರಾವಣ ಅಪಾಯಕಾರಿ ಅಲ್ಲದ ಬಹು ಉಪಯುಕ್ತ ಶಿಲೀಂದ್ರ ನಾಶಕ. ಆದರೆ ಇದನ್ನು ವೈಜ್ಞಾನಿಕವಾಗಿ ತಯಾರಿಸುವಲ್ಲಿ ವಿಫಲವಾದರೆ ರಸಸಾರದಲ್ಲಿ ಆಗುವ ವ್ಯತ್ಯಾಸಗಳಿಂದಾಗಿ ಶಿಲೀಂದ್ರ ರೋಗಗಳು ಸಮರ್ಪಕವಾಗಿ ನಾಶವಾಗುವುದಿಲ್ಲ. ತಟಸ್ಥ ರಸಸಾರ ಇಲ್ಲದ ದ್ರಾವಣವನ್ನು ಗಿಡಗಳ ಮೇಲೆ ಸಿಂಪಡಣೆ ಮಾಡಿದಾಗ ಎಲೆಗಳು ಸುಟ್ಟು ಅಡ್ಡ ಪರಿಣಾಮಗಳನ್ನು ಎದುರಿಸುವಂತಾಗುತ್ತದೆ. ಆದುದರಿಂದ ವೈಜ್ಞಾನಿಕ ಪದ್ಧತಿಯಲ್ಲಿ ದ್ರಾವಣವನ್ನು ತಯಾರಿಸಿ ಸಿಂಪರಣೆಗೆ ದ್ರಾವಣ ತಯಾರಿಸಿ ಸಿಂಪರಣೆಗೆ ಹಿರಿಯ ವಿಜ್ಞಾನಿ ಮತ್ತು ಐಸಿಎಆರ್ ಕೃಷಿ ವಿಜ್ಞಾನ ಕೇಂದ್ರ ಮುಖ್ಯಸ್ಥ ಟಿ.ಪಿ.ಭರತ್ ಕುಮಾರ್ ಸಲಹೆ ನೀಡಿದ್ದಾರೆ.
ಶೇ.1ರ ಬೋರ್ಡೋ ದ್ರಾವಣ ತಯಾರಿಸಲು ಬೇಕಾದ ವಸ್ತುಗಳು : ಮೈಲು ತುತ್ತ 1ಕೆ.ಜಿ, ಸುಣ್ಣ 1ಕೆಜಿ, ನೀರು 100 ಲೀ, ಸ್ವಚ್ಛವಾದ ಕಬ್ಬಿಣದ ತುಂಡು/ಚಾಕು/ಪಿ.ಹೆಚ್ ಪೇಪರ್, 10 ಲೀ ಸಾಮಥ್ರ್ಯದ 2 ಪ್ಲಾಸ್ಟಿಕ್ ಬಕೆಟ್, 100 ಲೀ ಸಾಮಥ್ರ್ಯದ 1 ಪ್ಲಾಸ್ಟಿಕ್ ಬ್ಯಾರೆಲ್/ಡ್ರಮ್.
ತಯಾರಿಕಾ ವಿಧಾನ : 1ಕೆ.ಜಿ ಮೈಲುತುತ್ತನ್ನು 10ಲೀ ನೀರಿರುವ ಪ್ಲಾಸ್ಟಿಕ್ ಬಕೆಟ್ ನಲ್ಲಿ ಸಂಪೂರ್ಣವಾಗಿ ಕರಗಿಸಬೇಕು. ಇನ್ನೊಂದು 10 ಲೀ ನೀರಿರುವ ಬಕೆಟ್‍ನಲ್ಲಿ 1 ಕೆಜಿ ಸುಣ್ಣವನ್ನು ಕರಗಲು ಬಿಡಬೇಕು. ಕರಗಿದ 1ಲೀ ಸುಣ್ಣದ ದ್ರಾವಣದಲ್ಲಿ ಸ್ವಲ್ಪ ಪ್ರಮಾಣದ ದ್ರಾವಣವನ್ನು 80 ಲೀ ನೀರು ಇರುವ ಪ್ಲಾಸ್ಟಿಕ್ ಡ್ರಮ್‍ಗೆ ಸುರಿಯಬೇಕು. ನಂತರ 10 ಲೀ ಮೈಲು ತುತ್ತದ ದ್ರಾವಣವನ್ನು ಬ್ಯಾರೆಲ್‍ಗೆ ಸುರಿಯಬೇಕು. ಸರಿಯಾದ ಶೆ.1ರ ಬೋರ್ಡೋ ದ್ರಾವಣದ ಮಿಶ್ರಣ ತಿಳಿನೀಲಿ ಬಣ್ಣದ್ದಾಗಿರುತ್ತದೆ.
ಬೋರ್ಡೋ ದ್ರಾವಣದ ಪರೀಕ್ಷೆ: ತಯಾರಿ ಮಾಡಿದ ಮಿಶ್ರಣವು ಸರಿಯಾಗಿದೆಯೋ ಇಲ್ಲವೋ ಎಂಬುದನ್ನು ಪರೀಕ್ಷಿಸಲು ಒಂದು ಸ್ವಚ್ಛವಾದ ಚಾಕು, ಕಬ್ಬಿಣದ ತುಂಡು ಅಥವಾ ಒಂದು ಬ್ಲೇಡ್ ಅನ್ನು ಮಿಶ್ರಣದಲ್ಲಿ ಒಂದು ನಿಮಿಷಗಳ ಕಾಲ ಅದ್ದಿ ತೆಗೆಯಬೇಕು. ಅದರ ಮೇಲೆ ಕಂದು ಇಲ್ಲವೇ ಕೆಂಪು ಬಣ್ಣ ಇಲ್ಲದೆ ಹೊಳೆಯುತ್ತಿದ್ದರೆ ಮಾತ್ರ ದ್ರಾವಣ ಸರಿಯಾಗಿ ತಯಾರಾಗಿದೆ ಎಂದು ಅರ್ಥೈಸಬಹುದು. ಆಗ ಮಾತ್ರ ದ್ರಾವಣ ಗಿಡಗಳಿಗೆ ಸಿಂಪಡಣೆ ಮಾಡಲು ಯೋಗ್ಯವಾಗಿರುತ್ತದೆ.
ಬೋರ್ಡೋ ದ್ರಾವಣವನ್ನು ತಯಾರಿಸಲು ಯಾವಾಗಲೂ ಮಣ್ಣಿನ, ಕಟ್ಟಿಗೆಯ ಅಥವಾ ಪ್ಲಾಸ್ಟಿಕ್ ಪರಿಕರಗಳನ್ನು ಮಾತ್ರ ಬಳಸಬೇಕು. ಬೋರ್ಡೋ ದ್ರಾವಣಕ್ಕೆ ಯಾವುದೇ ಪೇಡೆನಾಶಕಗಳನ್ನು ಮಿಶ್ರಣ ಮಾಡಬಾರದು. ಬಳಕೆ ಮಾಡುವಾಗ ಬಟ್ಟೆಯಲ್ಲಿ ಅಥವಾ ಸಣ್ಣ ಕಣ್ಣಿನ ಜರಡಿಯಲ್ಲಿ ಶೋಧಿಸಿ ಉಪಯೋಗಿಸಬೇಕು. ಸಿಂಪರಣೆ ಮಾಡುವಾಗ ಆಗಾಗ್ಗೆ ಪದೇ ಪದೇ ಕಲಸಿ ಬಳಸಬೇಕು. ಹೆಚ್ಚಿನ ಮಾಹಿತಿಗಾಗಿ ಮೂಡಿಗೆರೆ ಕೃಷಿ ವಿಜ್ಞಾನ ಕೇಂದ್ರ. ದೂ.08263-228198 ಗೆ ಸಂಪರ್ಕಿಸಲು ತಿಳಿಸಿದ್ದಾರೆ.