ಬಳ್ಳಾರಿ : ಕಾಂಗ್ರೆಸ್ ಪಕ್ಷವನ್ನು ಕಟ್ಟಿ ಬೆಳೆಸಿದ ಡಾ.ಜಿ. ಪರಮೇಶ್ವರ್ ಅವರನ್ನು ದಲಿತ ಎಂಬ ಕಾರಣಕ್ಕೆ ಮೂಲೆಗುಂಪು ಮಾಡಿದ್ದೀರಿ ಎಂದು ಆರೋಗ್ಯ ಸಚಿವ ಶ್ರೀ ರಾಮುಲು ಅವರು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ವಿರುದ್ಧ ಮಾತಿನ ಚಾಟಿ ಬೀಸಿದ್ದಾರೆ. ಹೊಸಪೇಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪೆದ್ದ ಎಂದು ಹೇಳಿದ್ದಾರೆ. ನಾನು ಪೆದ್ದ ಎಂಬುವುದನ್ನು ಒಪ್ಪಿಕೊಳ್ಳುತ್ತೇನೆ. ನೀನು ಕಾಂಗ್ರೆಸ್ ಪಕ್ಷದ ಕೆಲವು ನಿಷ್ಠಾವಂತರನ್ನು ತುಳಿದು ರಾಜಕಾರಣ ಮಾಡಿದ್ದೀಯಾ. ನೀನು ಎಷ್ಟು ವಂಚನೆ ಮಾಡಿದ್ದೀಯಾ ಎಂಬುವುದನ್ನು ನಿನ್ನ ಶಿಷ್ಯಂದಿರು ಎಂಟಿಬಿ ನಾಗರಾಜು ಮತ್ತು ಮುನಿರತ್ನ ಅವರು ಜನರಿಗೆ ತಿಳಿಸಿದ್ದಾರೆ ಎಂದು ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದು, ನಿಮ್ಮ ಮಾತಿನಿಂದ ಜಾತಿ ಸಂಘರ್ಷ ಆರಂಭವಾಗುತ್ತದೆ. ರಾಮುಲುಗೆ ಹೀಗೆ ಹೇಳಿದ್ದಾರೆ ಎಂದು ವಾಲ್ಮೀಕಿ ಸಮಾಜ ಎದ್ದು ನಿಲ್ಲುತ್ತದೆ. ಅದೇ ರೀತಿ ನಿಮ್ಮ ಬಗ್ಗೆ ನಾನು ಮಾತನಾಡಿದರೆ ಕುರುಬ ಸಮಾಜ ಎದ್ದು ನಿಲ್ಲುತ್ತದೆ. ಹೀಗಾಗಿ ಯುದ್ದ ಏನೇ ಇದ್ದರೂ ನನ್ನ ನಿಮ್ಮ ನಡುವೆ ಇರಲಿ. ನಮ್ಮ ಮಧ್ಯೆ ಜಾತಿ ವಿವಾದ ತರುವುದು ಬೇಡ. ಕಾಂಗ್ರೆಸ್ ಪಕ್ಷವನ್ನು ಕಟ್ಟಿ ಬೆಳೆಸಿದ ಡಾ.ಜಿ. ಪರಮೇಶ್ವರ್ ಅವರನ್ನು ದಲಿತ ಎಂಬ ಕಾರಣಕ್ಕೆ ಮೂಲೆ ಗುಂಪು ಮಾಡಿದ್ದೀರಿ. ನಿಮ್ಮ ಜೊತೆ ಈಗ ಯಾರು ಇಲ್ಲ. ನೀವು ವಿರೋಧ ಪಕ್ಷದ ನಾಯಕರು ನಿಮ್ಮ ಬಾಯಿಂದ ಇಂತಹ ಮಾತುಗಳು ಬರಬಾರದು ಎಂದು ಹೇಳಿದರು.










