ಕಾರು ಮರಕ್ಕೆ ಡಿಕ್ಕಿ- ನವ ದಂಪತಿಗಳು ಸೇರಿ ನಾಲ್ವರು ಸಜೀವ ದಹನ…

73
firstsuddi

ಭೋಪಾಲ್: ಕಾರೊಂದು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ನವ ದಂಪತಿಗಳು ಸೇರಿದಂತೆ ಕುಟುಂಬದ ನಾಲ್ವರು ಸಜೀವ ದಹನವಾಗಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

ಮಧ್ಯಪ್ರದೇಶದ ಹರ್ದಾ ಜಿಲ್ಲೆಯಲ್ಲಿ ಘಟನೆ ನಡೆದಿದ್ದು, ಮದುವೆ ಮುಗಿಸಿ ಹಿಂತಿರುಗಿ ಬರುತ್ತಿದ್ದ ನವ ದಂಪತಿಗಳ ಕಾರು ವೇಗವಾಗಿ ಬಂದು ಮರಕ್ಕೆ ಗುದ್ದಿದ ಪರಿಣಾಮ ಕಾರಿಗೆ ಬೆಂಕಿ ಹೊತ್ತಿಕೊಂಡು ಕಾರಿನಲ್ಲಿದ್ದ ಮೂವರು ಪುರುಷರು ಮತ್ತು ಓರ್ವ ಮಹಿಳೆ ಜೀವಂತವಾಗಿ ಸುಟ್ಟುಹೋಗಿದ್ದಾರೆ. ಆರು ತಿಂಗಳ ಹಿಂದೆ ವಿವಾಹವಾಗಿದ್ದ ದಂಪತಿಗಳು ದುರಂತದಲ್ಲಿ ಸಾವನ್ನಪ್ಪಿದ್ದಾರೆ.

ಘಟನೆಯ ಬಗ್ಗೆ ಮಾಹಿತಿ ತಿಳಿದ ತಕ್ಷಣ ಪೊಲೀಸರು ಅಗ್ನಿಶಾಮಕ ದಳದೊಂದಿಗೆ ಸ್ಥಳಕ್ಕಾಗಮಿಸಿದ್ದು, ಬೆಂಕಿಯಲ್ಲಿ ದಹನವಾಗಿದ್ದ ದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಜಿಲ್ಲೆಯ ತಿಮರ್ನಿ ಆರೋಗ್ಯ ಸಮುದಾಯ ಕೇಂದ್ರಕ್ಕೆ ಕಳುಹಿಸಲಾಯಿತು. ಅಪಘಾತದಲ್ಲಿ ಮೃತಪಟ್ಟವರನ್ನು ಅಖಿಲೇಶ್ ಕುಶ್ವಾಹ, ಗೋಲು ಚೌಧರಿ, ರಾಕೇಶ್ ಕುಶ್ವಾಹ ಮತ್ತು ಅವರ ಪತ್ನಿ ಶಿವಾನಿ ಎಂದು ಗುರುತಿಸಲಾಗಿದೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದಾರೆ.