ವಿದ್ಯಾರ್ಥಿಗಳ ಹಳೆ ಬಸ್ ಪಾಸ್ ಅವಧಿ ಜೂ.15ರವರೆಗೆ ವಿಸ್ತರಣೆ…

66
firstsuddi

ಬೆಂಗಳೂರು: ರಾಜ್ಯಾದ್ಯಂತ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಹಳೆ ಬಸ್ ಪಾಸ್ ಅವಧಿಯನ್ನು ಜೂ.15ರವರೆಗೆ ವಿಸ್ತರಣೆ ಮಾಡಲಾಗಿದೆ ಎಂದು ಕೆಎಸ್‌ಆರ್‌ಟಿಸಿ ಸುತ್ತೋಲೆಯನ್ನು ಹೊರಡಿಸಿದೆ.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ಪ್ರತಿ 2023-24ನೇ ಸಾಲಿನ ವಿದ್ಯಾರ್ಥಿ ಉಚಿತ / ರಿಯಾಯಿತಿ ಬಸ್ ಪಾಸ್ ಗಳನ್ನು ಇಡಿಸಿಎಸ್ ಇಲಾಖೆಯ ಸೇವಾ ಸಿಂಧು ತಂತ್ರಾಂಶದ ಮುಖಾಂತರ ಸಂಪೂರ್ಣ ಯಾಂತ್ರೀಕೃತವಾಗಿ ವಿತರಣೆ ಮಾಡಲು ಕ್ರಮ ತೆಗೆದುಕೊಂಡಿದೆ. ಇದಕ್ಕಾಗಿ ಇಡಿಸಿಎಸ್ ಇಲಾಖೆ ಸಿದ್ಧತೆ ಮಾಡಿಕೊಂಡಿದೆ.

ವಿದ್ಯಾರ್ಥಿಗಳು ಆನ್‌ಲೈನ್ ನಲ್ಲಿ ಅರ್ಜಿ ಸಲ್ಲಿಕೆಗೆ ಹಾಗೂ ಪಾಸ್ ಪಡೆಯಲು ಕಾಲಾವಕಾಶ ನೀಡಬೇಕಿರುತ್ತದೆ. ಜೊತೆಗೆ ವಿದ್ಯಾರ್ಥಿಗಳ ಶೈಕ್ಷಣಿಕ ತರಗತಿಗಳಿಗೆ ಹಾಜರಾಗಲು ಯಾವುದೇ ಅನಾನುಕೂಲವಾಗದಂತೆ ಕ್ರಮವಹಿಸಬೇಕಿರುತ್ತದೆ.

ಕೆಎಸ್‌ಆರ್‌ಟಿಸಿಯ ಸಾಮಾನ್ಯ ಮತ್ತು ವೇಗದೂತ ಬಸ್‌ಗಳಲ್ಲಿ ವಿದ್ಯಾರ್ಥಿಗಳು ಜೂನ್ 15ರ ತನಕ ನಗರ ಮತ್ತು ಹೊರವಲಯಗಳಲ್ಲಿ ಉಚಿತವಾಗಿ ಪ್ರಯಾಣಿಸಬಹುದು. ಇನ್ನು ಜೂ.15ರೊಳಗೆ ವಿದ್ಯಾರ್ಥಿಗಳು ಸರ್ಕಾರದಿಂದ ನೀಡಲಾಗುವ ಪ್ರಸಕ್ತ ಸಾಲಿನ (2023-24) ವಿದ್ಯಾರ್ಥಿ ಬಸ್ ಪಾಸ್ ಪಡೆಯಬೇಕು. ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣಿಸಬೇಕಾದರೆ ಪ್ರಸಕ್ತ ವರ್ಷದಲ್ಲಿ ಶಾಲಾ / ಕಾಲೇಜುಗಳಿಗೆ ದಾಖಲಾಗಿರುವುದನ್ನು ದೃಢೀಕರಿಸುವ ಶುಲ್ಕ ಪಾವತಿ ರಸೀದಿ ಅಥವಾ ಕಳೆದ ವರ್ಷದ (2022-23ನೇ ಸಾಲಿನ) ವಿದ್ಯಾರ್ಥಿ ಬಸ್ ಪಾಸ್ ಅನ್ನು ನಿರ್ವಾಹಕರಿಗೆ ತೋರಿಸಬೇಕಾದ್ದು ಅವಶ್ಯ ಎಂದು ನಿಗಮದ ಸುತ್ತೋಲೆ ವಿವರಿಸಿದೆ.