ಕೇಂದ್ರದಿಂದ ಬಂಪರ್ ; 7 ಲಕ್ಷದವರೆಗೆ ತೆರಿಗೆ ವಿನಾಯಿತಿ…

79
firstsuddi

ನವದೆಹಲಿ : ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಜೆಟ್ ನಲ್ಲಿ ಬಂಪರ್ ಘೋಷಣೆ ಮಾಡಿದ್ದು, ವೈಯಕ್ತಿಕ ಆದಾಯ ತೆರಿಗೆ ವಿನಾಯಿತಿ ಮಿತಿಯನ್ನು 7 ಲಕ್ಷ ರೂ.ಗೆ ವಿಸ್ತರಣೆ ಮಾಡಿದ್ದಾರೆ. ಮಧ್ಯಮ ವರ್ಗದ ವೇತನದಾರ ವರ್ಗದವರನ್ನು ದೃಷ್ಟಿಯಲ್ಲಿಟ್ಟುಕೊಂಡು ಈ ತೀರ್ಮಾನ ಕೈಗೊಳ್ಳಲಾಗಿದೆ. ಹಣಕಾಸು ಸಚಿವರು ಈ ಘೋಷಣೆ ಮಾಡುತ್ತಿದ್ದಂತೆಯೇ ಆಡಳಿತ ಪಕ್ಷದ ಸಂಸದರು ಚಪ್ಪಾಳೆ ತಟ್ಟಿ ಸಂಭ್ರಮ ವ್ಯಕ್ತಪಡಿಸಿದರು.

ತೆರಿಗೆ ಸ್ಲ್ಯಾಬ್​ ಅನ್ನು 5 ಹಂತಗಳಲ್ಲಿ ಬದಲಾಯಿಸಲಾಗಿದೆ ಎಂದು ಬಜೆಟ್​​ನಲ್ಲಿ ಘೋಷಣೆ ಮಾಡಲಾಗಿದೆ. ಇದರಂತೆ, ರೂ 0 ರಿಂದ ರೂ 3 ಲಕ್ಷದವರೆಗೆ – 0%, ರೂ 3 ರಿಂದ ರೂ 6 ಲಕ್ಷದವರೆಗೆ – 5%, ರೂ 6 ರಿಂದ ರೂ 9 ಲಕ್ಷದವರೆಗೆ – 10%, ರೂ 9 ರಿಂದ ರೂ 12 ಲಕ್ಷದವರೆಗೆ – 15%, ರೂ 12 ರಿಂದ ರೂ 15 ಲಕ್ಷದವರೆಗೆ – 20%, ರೂ 15 ಲಕ್ಷದ ಮೇಲೆ – 30% ತೆರಿಗೆ ಇರಲಿದೆ. ಹೊಸ ತೆರಿಗೆ ಪದ್ಧತಿಯೇ ಇನ್ನು ಮುಂದೆ ಡಿಫಾಲ್ಟ್ ತೆರಿಗೆ ಪದ್ಧತಿ ಆಗಿರುತ್ತದೆ. ಆದರೆ ಹಳೆಯ ತೆರಿಗೆ ಪದ್ಧತಿಯೂ ಚಾಲ್ತಿಯಲ್ಲಿರುತ್ತದೆ. 

ಆದಾಯ ತೆರಿಗೆಗೆ ಸಂಬಂಧಿಸಿದ ಮುಖ್ಯ ಘೋಷಣೆಗಳೇನು?
1. ವಿನಾಯ್ತಿ : 7 ಲಕ್ಷ ರೂ.ವರೆಗೆ ಆದಾಯ ತೆರಿಗೆ ವಿನಾಯ್ತಿ.

2. ಟ್ಯಾಕ್ಸ್ ಸ್ಲ್ಯಾಬ್ ಗಳು : ಹೊಸ ತೆರಿಗೆ ಪದ್ಧತಿಯಲ್ಲಿ ಟ್ಯಾಕ್ಸ್ ಸ್ಲ್ಯಾಬ್ ಗಳನ್ನು (ತೆರಿಗೆ ಹಂತಗಳು) 5ಕ್ಕೆ ಮಿತಗೊಳಿಸಲಾಗಿದೆ. 3 ಲಕ್ಷ ರೂ.ನಿಂದ ತೆರಿಗೆ ಹಂತ ಆರಂಭವಾಗಲಿದೆ.

3. ಸ್ಟಾಂಡರ್ಡ್ ಡಿಡಕ್ಷನ್ : ರೂ. 15.5 ಲಕ್ಷ ಅಥವಾ ಅದಕ್ಕೂ ಹೆಚ್ಚಿನ ಆದಾಯವನ್ನು ವೇತನದಿಂದ ಪಡೆಯುವವರಿಗೆ ರೂ. 52,500 ಸ್ಟಾಂಡರ್ಡ್ ಡಿಡಕ್ಷನ್ ಸೌಲಭ್ಯ ಸಿಗಲಿದೆ.

4. ಗರಿಷ್ಠ ತೆರಿಗೆ : ಈವರೆಗೆ ಗರಿಷ್ಠ ತೆರಿಗೆಯ ಮೇಲೆ ಶೇ 37ರಷ್ಟು ಸರ್ ಚಾರ್ಜ್ ವಿಧಿಸಲಾಗುತ್ತಿತ್ತು. ಈ ಪ್ರಮಾಣವನ್ನು ಹೊಸ ತೆರಿಗೆ ನೀತಿಯಡಿ ಶೇ 25ಕ್ಕೆ ಇಳಿಸಲಾಗಿದೆ. ಈ ಬೆಳವಣಿಗೆಯೊಂದಿಗೆ ದೇಶದಲ್ಲಿರುವ ಗರಿಷ್ಠ ತೆರಿಗೆ ದರವು ಶೇ 39ಕ್ಕೆ ಮಿತಗೊಳ್ಳಲಿದೆ.

5. ಲೀವ್ ಎನ್ ಕ್ಯಾಶ್ ಮೆಂಟ್ (ರಜೆ ನಗದೀಕರಣ) : ನಿವೃತ್ತರಾದಾಗ ಸಿಗುವ ರಜೆ ನಗದೀಕರಣ (ಲೀವ್ ಎನ್ ಕ್ಯಾಶ್ ಮೆಂಟ್) ಸೌಲಭ್ಯದ ಮೇಲೆ ಈವರೆಗೆ 3 ಲಕ್ಷ ರೂ.ವರೆಗೆ ಮಾತ್ರ ತೆರಿಗೆ ವಿನಾಯ್ತಿ ಇತ್ತು. ಈ ಮೊತ್ತವನ್ನು 25 ಲಕ್ಷ ರೂ.ಗೆ ಹೆಚ್ಚಿಸಲು ನಿರ್ಧರಿಸಲಾಗಿದೆ.