ಮೂಡಿಗೆರೆ : ಕೊಟ್ಟಿಗೆಹಾರದಲ್ಲಿ ಸಂಜೆ 6 ಗಂಟೆ ಬಳಿಕ ಬಸ್‍ಗಾಗಿ ಪ್ರಯಾಣಿಕರ ಪರದಾಟ…

1106
firstsuddi

ಮೂಡಿಗೆರೆ : ಆಗಸ್ಟ್ ತಿಂಗಳಲ್ಲಿ ಸುರಿದ ರಣಭೀಕರ ಮಳೆಗೆ ಚಾರ್ಮಾಡಿ ಘಾಟ್‍ನಲ್ಲಿ ಗುಡ್ಡ ಕುಸಿತ ಹಾಗೂ ಭೂ ಕುಸಿತವಾಗಿದ್ದ ಕಾರಣ ಬಸ್ ಸಂಚಾರಕ್ಕೆ ನಿರ್ಬಂಧ ಹೇರಲಾಗಿತ್ತು. ಬಳಿಕ ಸಾರ್ವಜನಿಕರ ಮನವಿ ಮೇರೆಗೆ ಮಿನಿ ಬಸ್ ಸಂಚಾರ ಆರಂಭಿಸಿದ್ದು, ಆದರೆ ಮಂಗಳೂರಿಗೆ ಚಾರ್ಮಾಡಿ ಮಾರ್ಗವಾಗಿ ಸಂಜೆ 6 ಗಂಟೆಯ ಬಳಿಕ ಮಿನಿ ಬಸ್ ಸಂಚಾರ ಇಲ್ಲದಿರುವುದರಿಂದ ಪ್ರಯಾಣಿಕರು ಪರದಾಡುವಂತಾಗಿದ್ದು, ಬೆಳಿಗ್ಗೆ 6 ರಿಂದ ಸಂಜೆ 6 ರವರೆಗೆ ಕೆ.ಎಸ್.ಆರ್.ಟಿ.ಸಿ ಮಿನಿ ಬಸ್ ಸಂಚಾರವಿದ್ದು ಸಂಜೆ 6 ಗಂಟೆಯ ಬಳಿಕ ಬಸ್ ಸಂಚಾರವಿಲ್ಲದೇ ಪ್ರಯಾಣಿಕರು ತೊಂದರೆ ಅನುಭವಿಸುವಂತಾಗಿದೆ. ಬೆಳಿಗ್ಗೆಯಿಂದ ಸಂಜೆಯವರೆಗೆ ಉಜಿರೆಯಿಂದ ಕೊಟ್ಟಿಗೆಹಾರಕ್ಕೆ ಅರ್ಧ ಗಂಟೆಗೆ ಒಂದರಂತೆ 8 ಬಸ್‍ಗಳು ಹಾಗೂ ಚಿಕ್ಕಮಗಳೂರಿನಿಂದ ಉಡುಪಿ ಮತ್ತು ಮಂಗಳೂರಿಗೆ ಒಂದೊಂದು ಬಸ್ ಸಂಚರಿಸುತ್ತಿವೆ.
ಸಂಜೆ 6 ರ ನಂತರ ಬಸ್ ಸಂಚಾರ ಇಲ್ಲದಿರುವುದರಿಂದ ಪ್ರಯಾಣಿಕರು ಖಾಸಗಿ ಬಾಡಿಗೆ ವಾಹನಗಳಿಗೆ ದುಪ್ಪಟ್ಟು ಹಣ ನೀಡಿ ಸಂಚರಿಸುವಂತಾಗಿದೆ. ರಾತ್ರಿ ಸಮಯದಲ್ಲಿ ಸಂಚಾರ ಇಲ್ಲದ ಮಾಹಿತಿ ಬರುವ ಕೆಲ ಪ್ರಯಾಣಿಕರು ಬಸ್ ಇಲ್ಲದೆ ಬಸ್ ನಿಲ್ದಾಣದಲ್ಲಿ ರಾತ್ರಿ ಕಳೆದು ಮರುದಿನ ಪ್ರಯಾಣ ಮುಂದುವರಿಸಿದ ಘಟನೆಗಳು ನಡೆದಿವೆ.
ರಾತ್ರಿ ಸಮಯದಲ್ಲಿ ಬಸ್ ಸಂಚಾರ ಆರಂಭಿಸಿದರೆ ಪ್ರಯಾಣಿಕರಿಗೆ ಅನುಕೂಲವಾಗಲಿದ್ದು ಕೆ.ಎಸ್.ಆರ್.ಟಿ.ಸಿ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಿ ಕ್ರಮ ಕೈಗೊಳ್ಳಬೇಕಿದೆ.
ಈ ಕುರಿತು ಫಸ್ಟ್ ಸುದ್ದಿಯೊಂದಿಗೆ ಮಾತನಾಡಿದ ಶಾಸಕ ಎಂ.ಪಿ. ಕುಮಾರಸ್ವಾಮಿ ಅವರು, ಮೂಡಿಗೆರೆ ಘಟಕಕ್ಕೆ ನಾಲ್ಕು ಮಿನಿ ಬಸ್‍ಗಳು ಬಂದಿದ್ದು ಇವುಗಳಲ್ಲಿ ಮೂರು ಬಸ್ಸುಗಳು ಹಳೆಯ ಬಸ್ ಆಗಿರುವುದರಿಂದ ಚಾರ್ಮಾಡಿ ಘಾಟ್‍ನಲ್ಲಿ ಸಂಚರಿಸಲು ಸಾಧ್ಯವಿಲ್ಲ. ಒಂದು ಬಸ್ಸನ್ನು ಮಾತ್ರ ದುರಸ್ಥಿ ಮಾಡಿ ಸಂಚಾರ ಆರಂಭಿಸಲಾಗಿದ್ದು ಹೆಚ್ಚಿನ ಬಸ್ ಬಿಡಲು ಸಾರಿಗೆ ಸಚಿವರನ್ನು ಬುಧವಾರ ಬೇಟಿಯಾಗಲಿದ್ದು ಇನ್ನೂ ಮೂರ್ನಾಲ್ಕು ದಿನದಲ್ಲಿ ಹೊಸ ಬಸ್ಸುಗಳು ಚಾರ್ಮಾಡಿ ಮಾರ್ಗವಾಗಿ ಸಂಚಾರ ಆರಂಭಿಸಲಿವೆ’