ಕೊಟ್ಟಿಗೆಹಾರ ಚೆಕ್ ಪೋಸ್ಟ್ ನಲ್ಲಿ ದಾಖಲೆ ರಹಿತ ರೂ. 1 ಲಕ್ಷ ಹಣ ಸೀಜ್…

53
firstsuddi

ಕೊಟ್ಟಿಗೆಹಾರ: ಬೆಂಗಳೂರಿನಿಂದ ಮಂಗಳೂರಿಗೆ ಹೋಗುತ್ತಿದ್ದ ಕಾರಿನಲ್ಲಿ ಬೆಂಗಳೂರು ಮೂಲದ ಸುಬ್ಬುಲಕ್ಷ್ಮಿ ಅವರ ಬಳಿ ರೂ 1 ಲಕ್ಷ ಹಣ ದೊರೆತಿದ್ದು, ಅದನ್ನು ಮೂಲ ದಾಖಲೆ ಇಲ್ಲದ ಕಾರಣ ಅಧಿಕಾರಿಗಳು ಸೀಜ್ ಮಾಡಿ ಸರ್ಕಾರಕ್ಕೆ ಒಪ್ಪಿಸಿದ್ದಾರೆ.

ಸುಬ್ಬುಲಕ್ಪ್ಮಿ ಅವರು ಮನೆ ಖರೀದಿಗೆ ಹಣ ತೆಗೆದುಕೊಂಡು ಹೋಗಿದ್ದರು. ಉಳಿದ ಹಣ ತನ್ನ ಬಳಿಯಲ್ಲಿ ಇಟ್ಟುಕೊಂಡಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೊಟ್ಟಿಗೆಹಾರದಲ್ಲಿ ಚುನಾವಣಾ ತಂಡದ ಅಧಿಕಾರಿ ಮುಖ್ಯಸ್ಥ ಶಿವಕುಮಾರ್ ಮಾತನಾಡಿ ಚುನಾವಣೆಗೆ ಹಲವು ಇಲಾಖೆಗಳಿಂದ ವಿವಿಧ ಅಧಿಕಾರಿಗಳನ್ನು ನಿಯೋಜನೆ ಮಾಡಲಾಗಿದೆ. ಕೊಟ್ಟಿಗೆಹಾರ ಚೆಕ್ ಪೋಸ್ಟ್ ಗಳಲ್ಲಿ ಮೂರು ಪಾಳೆಯದಲ್ಲಿ ಸಿಬ್ಬಂದಿಗಳು ಹಾಗೂ ಪೊಲೀಸರು ಕರ್ತವ್ಯ ನಿರ್ವಹಿಸುತ್ತಿದ್ದು, ಹಗಲು ರಾತ್ರಿ ವಾಹನಗಳ ತಪಾಸಣೆ ನಡೆಸಲಾಗುತ್ತದೆ. ಹೆಚ್ಚಿನ ಹಣವನ್ನು ಒಯ್ಯುವಂತಿಲ್ಲ. ರೂ 50ಸಾವಿರದವರೆಗೆ ದಾಖಲೆ ತೋರಿಸಿ ಹಣ ಒಯ್ಯಲು ಅವಕಾಶವಿದೆ. ದಾಖಲೆ ರಹಿತ ಹಣವನ್ನು ಸೀಜ್ ಮಾಡಲಾಗುತ್ತದೆ. ಪ್ರವಾಸಿಗರು ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ 50 ಸಾವಿರಕ್ಕಿಂತ ಹೆಚ್ಚು ಹಣವನ್ನು ಕೊಂಡೊಯ್ಯುವಂತಿಲ್ಲ. ಹಾಗಾಗಿ ಚುನಾವಣಾ ಕರ್ತವ್ಯದಲ್ಲಿರುವ ಸಿಬ್ಬಂದಿಗಳೊಂದಿಗೆ ಪ್ರವಾಸಿಗರು, ಸಾರ್ವಜನಿಕರು ಸಹಕರಿಸಬೇಕು ಎಂದರು.

ಈ ಸಂದರ್ಭದಲ್ಲಿ ಬಣಕಲ್ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಕೌಶಿಕ್, ಅಪರಾಧ ವಿಭಾಗದ ಸಬ್ ಇನ್ಸ್ ಪೆಕ್ಟರ್ ಎನ್.ಕೆ.ಓಮನ, ಸಿಬ್ಬಂದಿಗಳಾದ ಜಗದೀಶ್, ನವೀನ್, ವರ್ಷಿಣಿ, ಹೋಂ ಗಾರ್ಡ್ ಚೇತನ್, ಚುನಾವಣಾ ಕರ್ತವ್ಯದ ಅಧಿಕಾರಿಗಳಾದ ಬಿ.ಎಸ್.ಮರುಳಸಿದ್ದಪ್ಪ, ಯಶವಂತರಾಜ್, ಗಿರೀಶ್ ಇದ್ದರು.

ಕೊಟ್ಟಿಗೆಹಾರ ಚೆಕ್ ಪೋಸ್ಟ್ ನಲ್ಲಿ ಬಿಗಿ ವಾಹನ ತಪಾಸಣೆ:
ಮೂಡಿಗೆರೆ ತಾಲ್ಲೂಕಿನ ಕೊಟ್ಟಿಗೆಹಾರ ಚೆಕ್ ಪೋಸ್ಟ್, ಸೇರಿದಂತೆ ಹಲವು ಸೂಕ್ಷ್ಮ ಗಡಿ ಪ್ರದೇಶಗಳಲ್ಲಿ ಲೋಕಸಭೆ ಚುನಾವಣೆಯ ಹಿನ್ನಲೆಯಲ್ಲಿ ನೀತಿ ಸಂಹಿತೆ ಜಾರಿಯ ಮೇರೆಗೆ ಚುನಾವಣೆಯ ಕರ್ತವ್ಯದಲ್ಲಿ ನಿಯೋಜನೆ ಗೊಂಡಿರುವ ಅಧಿಕಾರಿಗಳು ಗಡಿಭಾಗದಿಂದ ಬರುವ ಎಲ್ಲಾ ವಾಹನಗಳ ತಪಾಸಣೆ ನಡೆಸಿ ಮಾಹಿತಿ ಕಲೆ ಹಾಕಲಾಗುತ್ತಿದೆ.