ಬಾಲಿವುಡ್ನ ಖ್ಯಾತ ಕಲಾ ನಿರ್ದೇಶಕ ನಿತಿನ್ ದೇಸಾಯಿ ಅವರು ಇಂದು ಮುಂಜಾನೆ ನೇಣಿಗೆ ಶರಣಾಗಿದ್ದಾರೆ. ಮುಂಬೈನ ಕರ್ಜತ್ ನಲ್ಲಿರುವ ತಮ್ಮ ಒಡೆತನದ ಎನ್ಡಿ ಸ್ಟುಡಿಯೋಸ್ನಲ್ಲಿ ಅವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಆಗಸ್ಟ್ 9ಕ್ಕೆ ಅವರು 58ನೇ ವರ್ಷದ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳಬೇಕಿತ್ತು. ಅಷ್ಟರಲ್ಲಿ ಇಂಥದ್ದೊಂದು ತಪ್ಪು ನಿರ್ಧಾರವನ್ನು ಅವರು ಕೈಗೊಂಡಿದ್ದಾರೆ, ಎನ್ನುತ್ತಾರೆ ದೇಸಾಯಿ ಆಪ್ತರು. ಕಲಾ ನಿರ್ದೇಶನಕ್ಕಾಗಿಯೇ ಅವರು 4 ರಾಷ್ಟ್ರ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದರು. ಅವರು ನಿರ್ಮಾಣ ಮಾಡುತ್ತಿದ್ದ ಅದ್ದೂರಿ ಸೆಟ್ಗಳನ್ನು ನೋಡಿ ಪ್ರೇಕ್ಷಕರು ಮೂಕವಿಸ್ಮಿತರಾಗಿದ್ದರು. ಹಲವು ಸಿನಿಮಾ ಯಶಸ್ಸಿಗೆ ಇವರು ಹಾಕುತ್ತಿದ್ದ ಸೆಟ್ಗಳು ಕೂಡ ಕಾರಣ ಆಗಿದ್ದವು.
‘ಹಮ್ ದಿಲ್ ದೇ ಚುಕೆ ಸನಮ್’, ‘ದೇವದಾಸ್’, ‘ಜೋಧಾ ಅಕ್ಬರ್’ ಹಾಗೂ ‘ಲಗಾನ್’ ಮೊದಲಾದ ಸಿನಿಮಾಗಳಿಗೆ ನಿತಿನ್ ಅವರು ಸೆಟ್ ನಿರ್ಮಾಣ ಮಾಡಿದ್ದರು. ವಿಧು ವಿನೋದ್ ಚೋಪ್ರಾ ನಿರ್ದೇಶನದ ‘1942: ಎ ಲವ್ ಸ್ಟೋರಿ’ ಸಿನಿಮಾದ ಸೆಟ್ ಸಾಕಷ್ಟು ಗಮನ ಸೆಳೆದಿತ್ತು. ಸಂಜಯ್ ಲೀಲಾ ಬನ್ಸಾಲಿ, ವಿಧು ವಿನೋದ್ ಚೋಪ್ರಾ, ರಾಜ್ಕುಮಾರ್ ಹಿರಾನಿ ಮೊದಲಾದ ಖ್ಯಾತ ನಾಮರ ಜೊತೆ ನಿತಿನ್ ಕೆಲಸ ಮಾಡಿದ್ದರು.
ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲವಾದರೂ ಆರ್ಥಿಕ ಸಂಕಷ್ಟವೇ ಕಾರಣ ಇರಬಹುದು ಎಂದು ಅಂದಾಜಿಸಲಾಗಿದೆ. ಈ ಕುರಿತು ತನಿಖೆ ನಡೆಯುತ್ತಿದೆ. ನಿತಿನ್ ಸಾವಿಗೆ ಅನೇಕರು ಸಂತಾಪ ಸೂಚಿಸಿದ್ದಾರೆ.










