ಕನ್ನಡದ ಖ್ಯಾತ ನಟ ದಿ.ಕಲ್ಯಾಣ್ ಕುಮಾರ್ ಸೊಸೆ ಪ್ರಿಯದರ್ಶಿನಿ(43) ನಿಧನರಾಗಿದ್ದಾರೆ. ಕಲ್ಯಾಣ್ ಕುಮಾರ್ ಪುತ್ರ, ನಟ ಭರತ್ ಕಲ್ಯಾಣ್ ಅವರ ಪತ್ನಿಯೂ ಆಗಿರುವ ಪ್ರಿಯದರ್ಶಿನಿ ಪ್ಯಾಲಿಯೋ ಡಯಟ್ ಮಾಡುತ್ತಿದ್ದರು ಎಂದು ಹೇಳಲಾಗುತ್ತಿದೆ.
ಪ್ರಿಯದರ್ಶಿನಿ ತೂಕ ಇಳಿಸಿಕೊಳ್ಳಲು ಪ್ಯಾಲಿಯೋ ಡಯಟ್ ನಲ್ಲಿದ್ದರು ಎಂದು ಹೇಳಲಾಗುತ್ತಿದ್ದು, ಡಯಟ್ ಬದಲಾಗಿದ್ದರಿಂದ ಮಧುಮೇಹ ಏಕಾಏಕಿ ಏರಿಕೆ ಕಂಡಿದೆ. ಕೂಡಲೇ ಅವರನ್ನು ಚೆನ್ನೈನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಅವರು ಕೋಮಾಗೆ ಜಾರಿದ್ದಾರೆ.
ಸತತ ಮೂರು ತಿಂಗಳಿಂದಲೂ ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಕೋಮಾಗೆ ಜಾರಿದ ನಂತರ ಅವರ ಆರೋಗ್ಯ ಮತ್ತಷ್ಟು ಹದಗೆಟ್ಟಿದ್ದು, ತೀವ್ರ ನಿಗಾಘಟಕದಲ್ಲೇ ಅವರಿಗೆ ಚಿಕಿತ್ಸೆ ಮುಂದುವರೆಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ನಿಧನರಾಗಿದ್ದಾರೆ. ಭರತ್ ಹಾಗೂ ಪ್ರಿಯದರ್ಶಿನಿ ದಂಪತಿಗೆ ಓರ್ವ ಮಗ ಹಾಗೂ ಮಗಳು ಇದ್ದಾರೆ.
ಕಲ್ಯಾಣ್ ಕುಮಾರ್ ಪುತ್ರ ಭರತ್ ಕಲ್ಯಾಣ್ ತಮಿಳು ಕಿರುತೆರೆಯ ಫೇಮಸ್ ನಟ. ಕನ್ನಡದಲ್ಲೂ ಅವರು ಸಿನಿಮಾ ಮಾಡಿದ್ದಾರೆ.










