ಗರಗಸದಿಂದ ಶ್ರದ್ಧಾಳ ದೇಹ ಕತ್ತರಿಸಿದ್ದ ಅಫ್ತಾಬ್ : ಮೂಳೆಯ ಮರಣೋತ್ತರ ಪರೀಕ್ಷೆಯಿಂದ ಬಯಲು…

71
firstsuddi

ನವದೆಹಲಿ : ತನ್ನ ಲಿವ್ ಇನ್ ಸಂಗಾತಿ ಅಫ್ತಾಬ್ ಪೂನಾವಾಲಾನಿಂದ ಹತ್ಯೆಗೀಡಾದ ಶ್ರದ್ಧಾ ವಾಕರ್ ಪ್ರಕರಣ ಇಡೀ ದೇಶವನ್ನೇ ಬೆಚ್ಚಿಬೀಳಿಸಿತ್ತು. ಅಫ್ತಾಬ್ ಆಕೆಯ ದೇಹವನ್ನು ತುಂಡು ತುಂಡಾಗಿ ಕತ್ತರಿಸಲು ಗರಗಸವನ್ನು ಬಳಸಿದ್ದ ಎಂದು ಶ್ರದ್ಧಾಳ ಮೂಳೆಯ ಮರಣೋತ್ತರ ಪರೀಕ್ಷೆಯಿಂದ ಬಹಿರಂಗವಾಗಿದೆ.

ಮೆಹ್ರೌಲಿ ಅರಣ್ಯ ಪ್ರದೇಶ ಮತ್ತು ಗುರುಗ್ರಾಮಗಳಲ್ಲಿ ಸಿಕ್ಕಿದ್ದ ಮೂಳೆಗಳು ಶ್ರದ್ಧಾಳದ್ದೇ ಎನ್ನುವುದು ಕಳೆದ ತಿಂಗಳು ನಡೆದ ಡಿಎನ್ ಎ ಪರೀಕ್ಷೆ ವರದಿಗಳಿಂದ ಖಚಿತವಾಗಿತ್ತು. ಶ್ರದ್ಧಾಳನ್ನು ಕೊಂದು ಆಕೆಯ ದೇಹಗಳನ್ನು ಕತ್ತರಿಸಿದ್ದ ಅಫ್ತಾಬ್, ಅವುಗಳನ್ನು ತಾನು ಎಸೆದಿದ್ದ ಜಾಗಗಳನ್ನು ಪೊಲೀಸರಿಗೆ ತೋರಿಸಿದ್ದ.

ಅಫ್ತಾಬ್ ಮತ್ತು ಶ್ರದ್ಧಾ ಲಿವ್ ಇನ್ ಸಂಗಾತಿಗಳಾಗಿ ಕೆಲವು ಸಮಯ ವಾಸಿಸಿದ್ದ ಫ್ಲ್ಯಾಟ್ ನಲ್ಲಿ ಸಿಕ್ಕಿರುವ ರಕ್ತದ ಕಲೆಗಳು ಕೂಡ ಶ್ರದ್ಧಾಳ ಡಿಎನ್ ಎಗೆ ಹೋಲಿಕೆಯಾಗುತ್ತಿದೆ. ಶ್ರದ್ಧಾಳ ತಂದೆ ವಿಕಾಸ್ ವಾಕರ್ ಅವರ ಡಿಎನ್ ಎ ಮಾದರಿಗಳೊಂದಿಗೆ ಇವುಗಳನ್ನು ಪರೀಕ್ಷಿಸಲಾಗಿದೆ. ಮೂಳೆಗಳ ಅಟಾಪ್ಸಿಯನ್ನು ರಾಜಧಾನಿ ದಿಲ್ಲಿಯಲ್ಲಿರುವ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ (ಏಮ್ಸ್) ನಡೆಸಲಾಗಿದೆ.

26 ವರ್ಷದ ಶ್ರದ್ಧಾಳನ್ನು ಆಕೆಯ ಗೆಳೆಯ ಅಫ್ತಾಬ್ ಪೂನಾವಾಲಾ, ಮೇ 18ರಂದು ದೆಹಲಿಯ ಮೆಹ್ರೌಲಿ ಪ್ರದೇಶದಲ್ಲಿನ ಅಪಾರ್ಟ್ಮೆಂಟ್ ನಲ್ಲಿ ಕೊಲೆ ಮಾಡಿದ್ದ. ಬಳಿಕ ಆಕೆಯ ದೇಹವನ್ನು 35 ತುಂಡುಗಳಾಗಿ ಕತ್ತರಿಸಿದ್ದ. ಬಳಿಕ ಫ್ರಿಡ್ಜ್ ಖರೀದಿಸಿ, ಅದರಲ್ಲಿ ಆಕೆಯ ದೇಹಗಳನ್ನು ಇರಿಸಿದ್ದ ಅಫ್ತಾಬ್, ಒಂದೊಂದೇ ತುಂಡುಗಳನ್ನು ನಗರದ ಬೇರೆ ಬೇರೆ ಭಾಗಗಳಿಗೆ ಕೊಂಡೊಯ್ದು ಎಸೆದು ಬರುತ್ತಿದ್ದ. ಶ್ರದ್ಧಾಳ ಕೊಲೆ ಆರೋಪದಲ್ಲಿ 28 ವರ್ಷದ ಯುವಕ ಅಫ್ತಾಬ್ ನ.26ರಿಂದ ನ್ಯಾಯಾಂಗ ಬಂಧನದಲ್ಲಿದ್ದಾನೆ. ದೆಹಲಿ ಪೊಲೀಸರು ಈ ತಿಂಗಳ ಕೊನೆಯಲ್ಲಿ ಪ್ರಕರಣದ ಆರೋಪಪಟ್ಟಿ ಸಲ್ಲಿಸುವ ಸಾಧ್ಯತೆಯಿದೆ.