ಕೊರೊನಾ ವಿರುದ್ಧ ಭಾರತ ಯಶಸ್ವಿಯಾಗಿ ಹೋರಾಟ ನಡೆಸುತ್ತಿದೆ : ರಾಷ್ಟ್ರಪತಿ ಕೋವಿಂದ್.

78
firstsuddi

ನವದೆಹಲಿ : ಇಂದಿನಿಂದ 2022ರ ಕೇಂದ್ರ ಬಜೆಟ್ ಅಧಿವೇಶನ ಆರಂಭಗೊಂಡಿದ್ದು, ಉಭಯ ಸದನ ಉದ್ದೇಶಿಸಿ ಮಾತನಾಡಿದ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ತಮ್ಮ ಕರ್ತವ್ಯಗಳಿಗೆ ಆದ್ಯತೆ ನೀಡಿ ಭಾರತದ ಹಕ್ಕುಗಳನ್ನು ಪಡೆಯಲು ನೆರವಾದ ಲಕ್ಷಾಂತರ ಸ್ವಾತಂತ್ರ್ಯ ಹೋರಾಟಗಾರರಿಗೆ ನಾನು ತಲೆಬಾಗುತ್ತೇನೆ. ಸ್ವಾತಂತ್ರ್ಯದ 75 ವರ್ಷಗಳಲ್ಲಿ ಭಾರತದ ಅಭಿವೃದ್ಧಿ ಪಯಣಕ್ಕೆ ಕೊಡುಗೆ ನೀಡಿದ ವ್ಯಕ್ತಿಗಳನ್ನು ಗೌರವದಿಂದ ಸ್ಮರಿಸುತ್ತೇನೆ ಎಂದರು.

ಈ ವರ್ಷದಿಂದ ಕೇಂದ್ರ ಸರ್ಕಾರವು ನೇತಾಜಿಯವರ ಜನ್ಮದಿನವಾದ ಜನವರಿ 23ರಿಂದ ಗಣರಾಜ್ಯೋತ್ಸವ ಆಚರಣೆ ಆರಂಭಿಸಿದೆ. ದೇಶದ ಸುರಕ್ಷಿತ ಭವಿಷ್ಯಕ್ಕಾಗಿ ಇತಿಹಾಸವನ್ನು ನೆನಪಿಟ್ಟುಕೊಳ್ಳುವುದು ಮತ್ತು ಅದರಿಂದ ಕಲಿಯುವುದು ಬಹಳ ಎಂದು ನಮ್ಮ ಸರ್ಕಾರವು ನಂಬುತ್ತದೆ ಎಂದು ತಿಳಿಸಿದರು. ಇದೇ ವೇಳೆ ಸಾಂಕ್ರಾಮಿಕ ರೋಗ ಮಹಾಮಾರಿ ಕೊರೊನಾ ವಿರುದ್ಧ ಭಾರತ ಯಶಸ್ವಿಯಾಗಿ ಹೋರಾಟ ನಡೆಸುತ್ತಿದ್ದು, ಕೊರೊನಾ ವಾರಿಯರ್ಸ್ ಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ಕೋವಿಡ್ ನಿಂದಾಗಿ ಅನೇಕ ಜೀವಗಳು ಬಲಿಯಾದವು. ಅಂತಹ ಸಂದರ್ಭಗಳಲ್ಲಿಯೂ ಕೇಂದ್ರ, ರಾಜ್ಯಗಳು, ವೈದ್ಯರು, ದಾದಿಯರು, ವಿಜ್ಞಾನಿಗಳು, ಆರೋಗ್ಯ ಕಾರ್ಯಕರ್ತರು ತಂಡಗಳಾಗಿ ಕೆಲಸ ಮಾಡಿದರು. ನಮ್ಮ ಆರೋಗ್ಯ ರಕ್ಷಣೆ ಮತ್ತು ಮುಂಚೂಣಿಯ ಕಾರ್ಯಕರ್ತರಿಗೆ ನಾನು ಕೃತಜ್ಞನಾಗಿದ್ದೇನೆ.

ಕೋವಿಡ್ ವಿರುದ್ಧದ ಹೋರಾಟದಲ್ಲಿ ಭಾರತದ ಸಾಮರ್ಥ್ಯ ಏನೆಂಬುದು ಲಸಿಕೆ ಕಾರ್ಯಕ್ರಮದಲ್ಲಿ ಸ್ಪಷ್ಟವಾಗಿದೆ. ಒಂದು ವರ್ಷಕ್ಕಿಂತ ಕಡಿಮೆ ಅವಧಿಯಲ್ಲಿ ನಾವು 150 ಕೋಟಿ ಡೋಸ್ ಗಳ ಲಸಿಕೆಯನ್ನು ನೀಡಿದ ದಾಖಲೆ ಮಾಡಿದ್ದೇವೆ. ಇಂದು, ಗರಿಷ್ಠ ಸಂಖ್ಯೆಯ ಡೋಸ್ ಗಳನ್ನು ನೀಡುವ ವಿಷಯದಲ್ಲಿ ನಾವು ವಿಶ್ವದ ಪ್ರಮುಖ ರಾಷ್ಟ್ರಗಳಲ್ಲಿ ಒಂದಾಗಿದ್ದೇವೆ. ಆಯುಷ್ಮಾನ್ ಭಾರತ್ ಕಾರ್ಡ್ ಬಡವರಿಗೆ ಅನುಕೂಲವಾಗಿದೆ. ಜನೌಷದಿ ಕೇಂದ್ರದಲ್ಲಿ ಕಡಿಮೆ ಬೆಲೆಯಲ್ಲಿ ಔಷಧಿಗಳ ಲಭ್ಯತೆಯೂ ಉತ್ತಮ ಕ್ರಮವಾಗಿದೆ ಎಂದು ಕೇಂದ್ರ ಸರ್ಕಾರದ ಸಾಧನೆಯನ್ನು ಹಾಡಿ ಹೊಗಳಿದರು.

ಸಾಂಕ್ರಾಮಿಕ ಸಮಯದಲ್ಲಿ 44 ಕೋಟಿ ಬಡ ನಾಗರಿಕರನ್ನು ಬ್ಯಾಂಕಿಂಗ್ ವ್ಯವಸ್ಥೆಗೆ ಲಿಂಕ್ ಮಾಡುವ ಮೂಲಕ ಕೋಟಿಗಟ್ಟಲೆ ಫಲಾನುಭವಿಗಳು ನೇರ ನಗದು ವರ್ಗಾವಣೆಯ ಪ್ರಯೋಜನಗಳನ್ನು ಪಡೆದಿದ್ದಾರೆ. ಬೀದಿಬದಿ ವ್ಯಾಪಾರಿಗಳಿಗೆ ಅನುಕೂಲವಾಗುವಂತೆ ಪ್ರಧಾನಮಂತ್ರಿ ಸ್ವಾನಿಧಿ ಯೋಜನೆಯನ್ನೂ ಸರ್ಕಾರ ನಡೆಸುತ್ತಿದೆ. ಇಲ್ಲಿಯವರೆಗೆ 28 ಲಕ್ಷ ಬೀದಿ ವ್ಯಾಪಾರಿಗಳು 2,900 ಕೋಟಿ ರೂ.ಗಳನ್ನು ಪಡೆದಿದ್ದಾರೆ. ಸರ್ಕಾರ ಈಗ ಈ ಮಾರಾಟಗಾರರನ್ನು ಆನ್‌ಲೈನ್ ಕಂಪನಿಗಳೊಂದಿಗೆ ಸಂಪರ್ಕಿಸುತ್ತಿದೆ ಎಂದು ಹೇಳಿದರು.

ಮಹಿಳಾ ಸಬಲೀಕರಣವು ನನ್ನ ಸರ್ಕಾರದ ಪ್ರಮುಖ ಆದ್ಯತೆಗಳಲ್ಲಿ ಒಂದಾಗಿದೆ. ಉಜ್ವಲ ಯೋಜನೆಯ ಯಶಸ್ಸಿಗೆ ನಾವೇ ಸಾಕ್ಷಿಗಳು. ಮುದ್ರಾ ಯೋಜನೆಯ ಮೂಲಕ, ಮಹಿಳೆಯರ ಉದ್ಯಮಶೀಲತೆ ಮತ್ತು ಕೌಶಲ್ಯಗಳು ಉತ್ತೇಜನವನ್ನು ಪಡೆದಿವೆ. ‘ಬೇಟಿ ಬಚಾವೋ, ಬೇಟಿ ಪಢಾವೋ’ ಮೂಲಕ ಹಲವು ಸಕಾರಾತ್ಮಕ ಫಲಿತಾಂಶಗಳು ಮುನ್ನೆಲೆಗೆ ಬಂದಿವೆ ಎಂದು ರಾಷ್ಟ್ರಪತಿ ಬಣ್ಣಿಸಿದರು.