ಗುಜರಾತ್ ಫಲಿತಾಂಶ ಕರ್ನಾಟಕದ ಮೇಲೂ ಪರಿಣಾಮ ಬೀರಲಿದೆ : ಪ್ರಹ್ಲಾದ್ ಜೋಶಿ.

56
firstsuddi

ನವದೆಹಲಿ : ಗುಜರಾತ್ ಚುನಾವಣಾ ಫಲಿತಾಂಶ ಮುಂಬರುವ ಕರ್ನಾಟಕ ವಿಧಾನ ಸಭೆ ಚುನಾವಣೆಯ ಮೇಲೂ ಪರಿಣಾಮ ಬೀರಲಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಗುಜರಾತ್ ನಲ್ಲಿ ಬಿಜೆಪಿ ಭರ್ಜರಿ ಜಯಗಳಿಸಿದ ಹಿನ್ನೆಲೆಯಲ್ಲಿ ನವದೆಹಲಿಯಲ್ಲಿಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿ ಇಷ್ಟೊಂದು ಸಂಖ್ಯೆಯ ಸ್ಥಾನ ಗಳಿಸಿರೋದು ಡಬಲ್ ಇಂಜಿನ್ ಸರ್ಕಾರಗಳ ಬಗ್ಗೆ ಜನರು ವಿಶ್ವಾಸ ಇಟ್ಟಿರೋದನ್ನು ತೋರಿಸುತ್ತದೆ. ಮುಂಬರುವ ಕರ್ನಾಟಕ ವಿಧಾನ ಸಭಾ ಚುನಾವಣೆಯಲ್ಲೂ ಬಿಜೆಪಿ ಡಬಲ್ ಇಂಜಿನ್ ಸರ್ಕಾರ ಬರಲಿದೆ ಎಂದರು.

ಎರಡು ಹೊಸ ರೆಕಾರ್ಡ್ ಅನ್ನು ಬಿಜೆಪಿ ಗುಜರಾತ್ ಚುನಾವಣೆಯಲ್ಲಿ ದಾಖಲಿಸಿದೆ. ಈ ಹಿಂದೆ ಗುಜರಾತ್ ನಲ್ಲಿ ಕಾಂಗ್ರೆಸ್ ನ ಮಾಧವ್ ಸಿಂಗ್ ಅವರಿದ್ದಾಗ 149 ಸ್ಥಾನಗಳನ್ನ ಪಡೆದಿದ್ದರು. ಗುಜರಾತ್ ಚುನಾವಣಾ ಇತಿಹಾಸದಲ್ಲಿ ಈ ನಂಬರ್ ಬ್ರೇಕ್ ಆಗಿರಲಿಲ್ಲ. ಇದೀಗ ಬಿಜೆಪಿ 156 ಸ್ಥಾನಗಳನ್ನ ಪಡೆದು ಇತಿಹಾಸ ನಿರ್ಮಿಸಿದೆ. ಇನ್ನು ಪಶ್ಚಿಮ ಬಂಗಾಳದಲ್ಲಿ ಸತತ 30 ವರ್ಷಗಳ ಕಾಲ ಕಮ್ಯುನಿಸ್ಟ್ ಪಾರ್ಟಿ ಆಡಳಿತ ನಡೆಸಿತ್ತು. ಗುಜರಾತ್ ನಲ್ಲಿ ಈ ಐದು ವರ್ಷ ಬಿಜೆಪಿ ಆಡಳಿತ ನಡೆಸಿದಾಗ ಕಮ್ಯುನಿಸ್ಟ್ ಪಕ್ಷದ ರೆಕಾರ್ಡ್ ಕೂಡ ಬ್ರೇಕ್ ಆಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತಕ್ಕೆ ದೇಶದ ಜನರು ಮನ್ನಣೆ ನೀಡಿರೋದು ಗುಜರಾತ್ ಚುನಾವಣೆ ಫಲಿಂತಾಶ ತೋರ್ಪಡಿಸುತ್ತಿದೆ. ಕರ್ನಾಟಕದಲ್ಲೂ ಬಿಜೆಪಿ ಬಹುಮತ ಪಡೆಯುವ ವಿಶ್ವಾಸ ಕಾರ್ಯಕರ್ತರಲ್ಲಿದೆ. ಗುಜರಾತ್ ಚುನಾವಣಾ ಫಲಿತಾಂಶ ಕಾರ್ಯಕರ್ತರಲ್ಲಿ ಇನ್ನಷ್ಟು ಉತ್ಸಾಹ ತುಂಬಲಿದೆ ಎಂದು ಪ್ರಲ್ಹಾದ್ ಜೋಶಿ ಹೇಳಿದರು.