ಗಾಂಧಿನಗರ : ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ಅವರು ತಮ್ಮ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಇಂದು ಮಧ್ಯಾಹ್ನ ರಾಜ್ಯಪಾಲ ಆಚಾರ್ಯ ದೇವವ್ರತ್ ಅವರ ನಿವಾಸಕ್ಕೆ ತೆರಳಿ ವಿಜಯ್ ರೂಪಾನಿ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯ ತವರು ರಾಜ್ಯವಾದ ಗುಜರಾತ್ ನಲ್ಲಿ ಮುಂದಿನ ವರ್ಷ ವಿಧಾನಸಭೆ ಚುನಾವಣೆ ನಡೆಯಲಿದ್ದು, ಇದರ ನಡುವೆ ರೂಪಾನಿ ಅವರ ರಾಜೀನಾಮೆ ಭಾರೀ ಚರ್ಚೆಗೆ ಗ್ರಾಸವಾಗಿದೆ.
ವಿಜಯ್ ರೂಪಾನಿಯವರ ಧಿಡೀರ್ ರಾಜೀನಾಮೆಗೆ ನಿಖರ ಕಾರಣ ಏನೆಂಬುದು ಸ್ಪಷ್ಟವಾಗಿಲ್ಲ. ಇತ್ತೀಚಿಗೆ ರಾಜೀನಾಮೆ ನೀಡಿದ ನಾಲ್ಕನೇ ಬಿಜೆಪಿ ಮುಖ್ಯಮಂತ್ರಿ ರೂಪಾನಿಯಾಗಿದ್ದಾರೆ. ಜುಲೈನಲ್ಲಿ ಕರ್ನಾಟಕದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ರಾಜೀನಾಮೆ ನೀಡಿದ್ದರು. ಅಲ್ಲದೆ ಉತ್ತರಾಖಂಡದಲ್ಲಿ ತ್ರಿವೇಂದ್ರ ಸಿಂಗ್ ರಾವತ್ರನ್ನು ಬದಲಿಸಿ ತೀರತ್ ಸಿಂಗ್ ರಾವತ್ ಅವರನ್ನು ಸಿಎಂ ಮಾಡಲಾಗಿತ್ತು. ಆದರೆ ಕೆಲ ದಿನಗಳಲ್ಲಿ ಅವರೂ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.










