ಗೃಹ ಸಚಿವರ ತವರಲ್ಲೇ ದಲಿತ ವಿವಾಹಿತೆ ಮೇಲೆ ಅತ್ಯಾಚಾರಕ್ಕೆ ಯತ್ನ!

65
firstsuddi

ಶಿವಮೊಗ್ಗ : ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ತವರಲ್ಲೇ ದಲಿತ ವಿವಾಹಿತೆಯೊಬ್ಬರ ಮೇಲೆ ನಾಲ್ವರು ಸಾಮೂಹಿಕ ಅತ್ಯಾಚಾರಕ್ಕೆ ಯತ್ನಿಸಿರುವ ಘಟನೆ ನಡೆದಿದೆ. ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸದ್ಯ ಮಹಿಳೆ ಹಾಗೂ ಆಕೆಯ ಪತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಘಟನೆ ಸಂಬಂಧ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಘಟನೆ ಬಳಿಕ ಇಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದರು. ಇದೀಗ ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಆದರ್ಶ ಹಾಗೂ ಸಂಪತ್ ನನ್ನು ತೀರ್ಥಹಳ್ಳಿ ಸಿಪಿಐ ಸಂತೋಷ್ ನೇತೃತ್ವದ ತಂಡ ಬಂಧಿಸಿದೆ. ಮತ್ತಿಬ್ಬರು ಆರೋಪಿಗಳ ಪತ್ತೆಗಾಗಿ ಕಾರ್ಯಾಚರಣೆ ಮುಂದುವರೆದಿದೆ.

ಸಂತ್ರಸ್ತೆ ನೀಡಿದ ದೂರಿನಲ್ಲೇನಿದೆ?: ತೀರ್ಥಹಳ್ಳಿ ತಾಲೂಕಿನ ಆರಗ ಗ್ರಾಮದಲ್ಲಿ ಕಳೆದ ಸೋಮವಾರ ರಾತ್ರಿ ಅನಾರೋಗ್ಯದಿಂದ ಬಳಲುತ್ತಿದ್ದ ಮಹಿಳೆಯೊಬ್ಬಳು ಆಕೆ ಗಂಡನೊಡನೆ ತೀರ್ಥಹಳ್ಳಿ ಆಸ್ಪತ್ರೆಗೆ ಹೋಗಿ ಸ್ವಗ್ರಾಮಕ್ಕೆ ವಾಪಸ್ ಆಗುತ್ತಿದ್ದರು. ಈ ಸಂದರ್ಭದಲ್ಲಿ ಸಂಪತ್, ಆದರ್ಶ ಹಾಗೂ ಇನ್ನಿಬ್ಬರು ತಮ್ಮನ್ನು ತಡೆದು ಗಂಡನಿಗೆ ಥಳಿಸಿದರು. ಇದರಿಂದ ನನ್ನ ಗಂಡ ಪ್ರಜ್ಞಾಹೀನರಾದರು.

ನಂತರ ಆರೋಪಿಗಳು ನನ್ನನ್ನು ಎಳೆದೊಯ್ದು ಅತ್ಯಾಚಾರ ಮಾಡಲು ಮುಂದಾದರು. ಈ ವೇಳೆ ನಾನು ಜೋರಾಗಿ ಕೂಗಿಕೊಂಡಾಗ ಗಂಡನಿಗೆ ಪ್ರಜ್ಞೆ ಬಂದಿದೆ. ಕೂಡಲೇ ಅವರು ಸಹಾಯಕ್ಕಾಗಿ ಕಿರುಚಿದರು. ಆಗ ಸ್ಥಳೀಯರು ಘಟನಾ ಸ್ಥಳಕ್ಕೆ ಓಡಿ ಬಂದಿದ್ದಾರೆ. ಇದರಿಂದ ಹೆದರಿದ ಅವರು ನನ್ನನ್ನು ಬಿಟ್ಟು ಓಡಿ ಹೋದರು ಎಂದು ದೂರಿನಲ್ಲಿ ತಿಳಿಸಿದ್ದಾರೆ. ಆದರೆ ಸ್ಥಳೀಯರು ಹೇಳುವ ಪ್ರಕಾರ, ಅಲ್ಲಿ ಸಣ್ಣ ಗಲಾಟೆ ನಡೆದಿದೆ. ಅತ್ಯಾಚಾರ ಯತ್ನ ನಡೆದಿರುವ ಬಗ್ಗೆ ಅನುಮಾನ ಇದೆ ಎನ್ನುತ್ತಾರೆ. ಒಟ್ಟಿನಲ್ಲಿ ಪೊಲೀಸ್ ತನಿಖೆಯಲ್ಲಿ ಸತ್ಯ ಬಯಲಾಗಬೇಕಿದೆ.