ಬೆಂಗಳೂರು : ಬೆಳಗಾವಿ ಅಧಿವೇಶನದಲ್ಲಿ ಮತಾಂತರ ನಿಷೇಧ ಕಾಯ್ದೆಗೆ ಅನುಮೋದನೆ ಪಡೆದಿತ್ತು. ಆದರೆ ಪರಿಷತ್ ನಲ್ಲಿ ಬಹುಮತ ಇಲ್ಲದ್ದಕ್ಕೆ ಕಾಯ್ದೆ ಮಂಡನೆಯನ್ನು ಸರ್ಕಾರ ಮುಂದೂಡಿತ್ತು. ಇದೀಗ ಸುಗ್ರಿವಾಜ್ಞೆ ಮೂಲಕ ಮತಾಂತರ ನಿಷೇಧ ಕಾಯ್ದೆ ಜಾರಿಗೆ ತರಲು ರಾಜ್ಯ ಸರ್ಕಾರ ನಿರ್ಧಾರ ಮಾಡಿದೆ.
ಈ ಕುರಿತು ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಮತಾಂತರ ನಿಷೇಧ ಕಾಯ್ದೆಯನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೆ ತರಲು ಇಂದು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗುವುದು ಎಂದು ಹೇಳಿದರು.
ಸ್ಥಳೀಯ ಸಂಸ್ಥೆ ಚುನಾವಣೆ ಸಂಬಂಧ ಇಂದು ಬೆಳಗ್ಗೆ ಸಭೆಯನ್ನು ನಡೆಸಲಾಗುತ್ತಿದ್ದು, ಕಾನೂನು ಸಚಿವರು, ಅಡ್ವೊಕೇಟ್ ಜನರಲ್ ಸಂಬಂಧಪಟ್ಟವರ ಜೊತೆ ಚರ್ಚಿಸಿ ಸುಪ್ರೀಂ ಕೋರ್ಟ್ ನ ಎರಡು ತೀರ್ಪುಗಳ ಬಗ್ಗೆ ಸಂಪೂರ್ಣ ವಿಶ್ಲೇಷಣೆ ಮಾಡುತ್ತೇವೆ. ಹಾಗೂ ವಿರೋಧ ಪಕ್ಷದ ನಾಯಕರು ಬರೆದಿರುವ ಪತ್ರ ಕುರಿತು ಕೂಡ ಚರ್ಚೆ ಮಾಡಲಾಗುವುದು ಎಂದರು.
ಇದುವರೆಗೂ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಸಂವಿಧಾನ ಪ್ರಕಾರ ಒಬಿಸಿಯವರಿಗೆ ಪ್ರಾತಿನಿಧ್ಯ ನೀಡುತ್ತಾ ಬಂದಿದ್ದೆವು. ಈಗ ಒಬಿಸಿ ಇಟ್ಟುಕೊಂಡೇ ಚುನಾವಣೆ ಮಾಡಬೇಕೆಂದು ಎಲ್ಲಾ ರಾಜಕೀಯ ಪಕ್ಷಗಳ ಮತ್ತು ಎಲ್ಲಾ ರಾಜ್ಯಗಳ ವಿಚಾರವೂ ಕೂಡ ಆಗಿದೆ. ಹೀಗಾಗಿ ಒಬಿಸಿ ಇಟ್ಟುಕೊಂಡು ಚುನಾವಣಾ ಪ್ರಕ್ರಿಯೆ ಬಗ್ಗೆ ಚರ್ಚೆ ನಡೆದಿದೆ ಎಂದರು.










