ಅರ್ಹತೆಗೆ ತಕ್ಕಂತೆ ಸಿಗದ ಉದ್ಯೋಗ ; ಮನನೊಂದು ಯುವತಿ ಆತ್ಮಹತ್ಯೆ!

68
firstsuddi

ಉಡುಪಿ : ಅರ್ಹತೆಗೆ ತಕ್ಕ ಉದ್ಯೋಗ ಸಿಗದ ಹಿನ್ನಲೆಯಲ್ಲಿ ಮನನೊಂದು ಯುವತಿಯೊಬ್ಬಳು ಆತ್ಮಹತ್ಯೆಗೆ ಶರಣಾದ ಘಟನೆ ಕಾಪು ತಾಲೂಕಿನ ಮೂಡುಬೆಳ್ಳೆ ಸಮೀಪದ ಕಟ್ಟಿಂಗೇರಿ ಗ್ರಾಮದಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

ಮೃತ ಯುವತಿಯನ್ನು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಮೂಲದ ಸಹನಾ (23) ಎಂದು ಗುರುತಿಸಲಾಗಿದೆ. ಒಂದು ವರ್ಷದ ಹಿಂದೆ ಮಂಗಳೂರಿನಲ್ಲಿ ಎಂಬಿಎ ಮಾಡಿದ್ದ ಸಹನಾ, ಉದ್ಯೋಗಕ್ಕಾಗಿ ಅಲೆದಾಡಿದ್ದಳು. ಆದರೆ ಎಲ್ಲಿಯೂ ತನ್ನ ಅರ್ಹತೆಗೆ ತಕ್ಕ ಕೆಲಸ ಸಿಕ್ಕಿರಲಿಲ್ಲ. ಏಪ್ರಿಲ್ 30 ರಂದು ಕಾಫು ತಾಲೂಕಿನ ಕಟ್ಟಿಂಗೇರಿಯ ಅಕ್ಕನ ಮನೆಗೆ ಬಂದಿದ್ದ ಸಹನಾ ಅಲ್ಲೇ ರಾತ್ರಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ.

ಅಸ್ವಸ್ಥಗೊಂಡ ಸಹನಾಳನ್ನು ಉಡುಪಿ ನಗರದ ಮಿಷನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ರವಾನಿಸಲಾಗಿದೆ. ಆಕೆಯ ಸ್ಥಿತಿ ಚಿಂತಾಜನಕ ಹಂತಕ್ಕೆ ತಲುಪಿದ್ದರಿಂದ ಮೇ 7 ರಂದು ಉಡುಪಿಯ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಸಹನಾ ಅವರನ್ನು ಸ್ಥಳಾಂತರಿಸಲಾಯಿತು. ಆದರೆ ಮೇ 9 ರಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಘಟನೆಯ ಕುರಿತು ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಹನಾ ಸಾವಿನ ಬೆನ್ನಲ್ಲೇ ಉಡುಪಿ ಜಿಲ್ಲಾ ಯುವ ಕಾಂಗ್ರೆಸ್, ರಾಜ್ಯ ಹಾಗೂ ಕೇಂದ್ರ ಸರಕಾರದ ವಿರುದ್ದ ಪ್ರತಿಭಟನೆ ನಡೆಸಲು ಮುಂದಾಗಿದ್ದು ಇಂದು ಮಧ್ಯಾಹ್ನ ಉಡುಪಿಯಲ್ಲಿ ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ನಲಪಾಡ್ ನೇತೃತ್ವದಲ್ಲಿ ಪ್ರತಿಭಟನೆ ನಡೆಯಲಿದೆ.