ಪ್ಯೊನ್ಗ್‌ಯಾಂಗ್ : ಎರಡು ವರ್ಷಗಳಲ್ಲಿ ಉತ್ತರ ಕೊರಿಯಾದಲ್ಲಿ ಕೋವಿಡ್ 19 ಪ್ರಕರಣ ಪತ್ತೆಯಾಗಿರಲಿಲ್ಲ. ಇದೀಗ ಮೊಟ್ಟ ಮೊದಲ ಬಾರಿಗೆ ಕೋವಿಡ್ 19 ಪ್ರಕರಣ ಪತ್ತೆಯಾಗಿದ್ದು, ಈ ಹಿನ್ನೆಲೆಯಲ್ಲಿ ತೀವ್ರ ರಾಷ್ಟ್ರೀಯ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ.
ರಾಜಧಾನಿಯಲ್ಲಿ ಜ್ವರದಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬರನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಈ ವೇಳೆ ಅವರಿಗೆ ಒಮಿಕ್ರಾನ್ ಸೋಂಕು ತಗುಲಿರುವುದು ದೃಢವಾಗಿದೆ ಎಂದು ಉತ್ತರ ಕೊರಿಯಾದ ಸರ್ಕಾರಿ ಸುದ್ದಿ ಸಂಸ್ಥೆಯೊಂದು ತಿಳಿಸಿದೆ.
ಕೊರೊನಾ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆಯೇ ತುರ್ತು ಸಭೆ ನಡೆಸಲಾಯಿತು. ಈ ವೇಳೆ ಅಧ್ಯಕ್ಷ ಕಿಮ್ ಜಾಂಗ್ ಉನ್ ವೈರಸ್ ನಿಯಂತ್ರಣ ಮಾಡಲು ಗರಿಷ್ಠ ತುರ್ತು ನಿಯಂತ್ರಣ ವ್ಯವಸ್ಥೆಯನ್ನು ಜಾರಿಗೊಳಿಸುವುದಾಗಿ ಘೋಷಣೆ ಮಾಡಿದರು. ಅಲ್ಲದೆ ಕಟ್ಟುನಿಟ್ಟಿನ ಗಡಿ ನಿಯಂತ್ರಣಗಳ ಮತ್ತು ಲಾಕ್ ಡೌನ್ ಕ್ರಮಗಳನ್ನು ಜಾರಿಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.










