ಬೆಂಗಳೂರು : ಈಗಾಗಲೇ ದಿವ್ಯಾ ಹಾಗರಗಿಗೆ ಅರೆಸ್ಟ್ ವಾರೆಂಟ್ ಹೊರಡಿಸಲಾಗಿದೆ. ಗೌರವಯುತವಾಗಿ ಬಂದು ಶರಣಾಗಬೇಕೆಂದು ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಎಚ್ಚರಿಕೆ ನೀಡಿದ್ದಾರೆ.
ಪಿಎಸ್ಐ ನೇಮಕಾತಿ ಅಕ್ರಮ ಪ್ರಕರಣದ ಪ್ರಮುಖ ಆರೋಪಿ ದಿವ್ಯಾ ಹಾಗರಗಿ ಅವರನ್ನು ಇದುವರೆಗೂ ಬಂಧನ ಮಾಡದಿರುವ ವಿಚಾರಕ್ಕೆ ಸಂಬಂಧಿಸಿದಂತೆ ತಮ್ಮ ನಿವಾಸದಲ್ಲಿ ಇಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಹಾಗರಗಿ ಸ್ಟ್ರಾಂಗ್ ಏನಿಲ್ಲ, ಅವರು ಊರು ಬಿಟ್ಟಿದ್ದಾರೆ. ಸದ್ಯದಲ್ಲೇ ಬಂಧಿಸಲಾಗುವುದು. ಶೀಘ್ರವೇ ಪೊಲೀಸರು ಅವರ ಆಸ್ತಿ ಮುಟ್ಟುಗೋಲು ಹಾಕಲಿದ್ದಾರೆ. ಮುಖ್ಯಮಂತ್ರಿಗಳ ಗಮನಕ್ಕೆ ತಂದು ಎಲ್ಲವೂ ತನಿಖೆ ಮಾಡಲು ಸಿಐಡಿಗೆ ಕೊಟ್ಟಿದ್ದೇವೆ. ಹಣಕ್ಕಾಗಿ ಸರ್ಕಾರಿ ಉದ್ಯೋಗಗಳನ್ನು ಮಾಡುವ ಗ್ಯಾಂಗ್ ಅನ್ನು ಹೊರಗೆ ತರುತ್ತೇವೆ ಎಂದರು.
ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ವಿಚಾರಣೆಗೆ ಹಾಜರಾಗದ ವಿಷಯಕ್ಕೆ ಪ್ರತಿಕ್ರಿಯಿಸಿ, ಪ್ರಿಯಾಂಕ್ ಖರ್ಗೆ ಅನೇಕ ಆರೋಪ ಮಾಡಿದ್ದಾರೆ. ಸಿಐಡಿಯವರು ಅವರಿಗೆ ನೋಟಿಸ್ ಕೊಟ್ಟಿದ್ದಾರೆ. ಅವರು ತನಿಖೆಗೆ ಸಹಕಾರ ನೀಡದೆ ಪಲಾಯನ ಮಾಡಿದ್ದಾರೆ. ನನ್ನ ಬಳಿ ದಾಖಲೆ ಇದೆ ಅನ್ನುತ್ತಾರೆ. ಆ ದಾಖಲೆ ಕೊಡಬಹುದಲ್ಲವೇ? ಎಂದು ಪ್ರಶ್ನಿಸಿದರು.
ಬೆಂಗಳೂರಲ್ಲಿ ಯುವತಿ ಮೇಲೆ ಆಸಿಡ್ ದಾಳಿ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು, ಈ ಬಗ್ಗೆ ಪೊಲೀಸರಿಂದ ಮಾಹಿತಿ ಪಡೆದಿದ್ದೇನೆ. ನಾಗೇಶ್ ಎಂಬುವನು ಯುವತಿ ಮೇಲೆ ಆಸಿಡ್ ಹಾಕಿದ್ದಾನೆ. ಪೊಲೀಸರು ಅವನ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಿದ್ದಾರೆ ಎಂದರು.










