ಚಿಕ್ಕಮಗಳೂರು : ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಅವಮಾನ ಮಾಡಿರುವ ಕಿಡಿಗೇಡಿಗಳ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕು : ರಾಹಿಲ್ ಷರೀಫ್

497
firstsuddi

ಚಿಕ್ಕಮಗಳೂರು : ಅಜ್ಜಂಪುರ ತಾಲ್ಲೂಕಿನ ಗಡಿ ಹಳ್ಳಿಯಲ್ಲಿ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಅವಮಾನ ಮಾಡಿರುವ ಕಿಡಿಗೇಡಿಗಳನ್ನು ಕೂಡಲೇ ಬಂಧಿಸುವಂತೆ ಯುವ ಕಾಂಗ್ರೇಸ್ ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷ ರಾಹಿಲ್ ಷರೀಫ್ ಒತ್ತಾಯಿಸಿದ್ದಾರೆ.
ದೇಶಕ್ಕೆ ಜಗತ್ತೇ ಮೆಚ್ಚುವಂತಹ ಸಂವಿಧಾನವನ್ನು ನೀಡಿದವರು ಡಾ|| ಬಿ.ಆರ್.ಅಂಬೇಡ್ಕರ್ ಅವರು. ಅವರ ಭಾವಚಿತ್ರಕ್ಕೆ ಅಥವಾ ಪ್ರತಿಮೆಗೆ ಅವಮಾನ ಮಾಡಿದರೆ ನಮ್ಮ ಸಂವಿಧಾನಕ್ಕೆ ಅಪಮಾನ ಮಾಡಿದಂತೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಅಂಬೇಡ್ಕರ್ ಅವರ ಸಂವಿಧಾನದಿಂದಾಗಿ ದೇಶದಲ್ಲಿಂದು ಮಹಿಳೆಯರು, ಹಿಂದುಳಿದವರು, ಅಲ್ಪಸಂಖ್ಯಾತರು ಮತ್ತು ದಲಿತರು ತುಸು ನೆಮ್ಮದಿಯಿಂದ ಬದುಕುವಂತಾಗಿದೆ, ಸಂವಿಧಾನ ಶಿಲ್ಪಿ ಮೀಸಲಾತಿ ನೀಡಿದ್ದರಿಂದಾಗಿ ಮೇಲ್ವರ್ಗದವರಿಗೆ ಸರಿಸಮನಾಗಿ ಬಾಳುವಂತಾಗಿದೆ ಅಂತಹ ಮಹಾನ್ ನಾಯಕನ ಭಾವಚಿತ್ರಕ್ಕೆ ಗೌರವಿಸುವುದನ್ನು ಬಿಟ್ಟು ಅಪಮಾನ ಮಾಡಿರುವ ದುಷ್ಕರ್ಮಿಗಳ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಮುಂದಿನ ದಿನಗಳಲ್ಲಿ ಇಂತಹ ಪ್ರಕರಣಗಳು ಮರುಕಳಿಸದಂತೆ ರಾಜ್ಯ ಸರ್ಕಾರ ಎಚ್ಚರಿಕೆ ವಹಿಸಬೇಕು ಎಂದು ಸಲಹೆ ಮಾಡಿದ್ದಾರೆ.