ಚಿಕ್ಕಮಗಳೂರು : ಅರ್ಥಪೂರ್ಣವಾಗಿ ಆಚರಿಸಿದ ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆ…

111
firstsuddi

ಚಿಕ್ಕಮಗಳೂರು : ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರ 159ನೇ ಜನ್ಮ ದಿನಾಚರಣೆಯನ್ನು ವಂದೇ ಮಾತರಂ ಟ್ರಸ್ಟ್ ನ ಪದಾಧಿಕಾರಿಗಳು ನಗರದಲ್ಲಿ ನಿನ್ನೆ ಅರ್ಥಪೂರ್ಣವಾಗಿ ಆಚರಿಸಿದರು.

ದೋಣಿಖಣದ ಶ್ರೀ ಕೊಲ್ಲಾಪುರದಮ್ಮನವರ ದೇವಾಲಯದ ಆವರಣದಲ್ಲಿ ಸಂಜೆ ಗೋಪೂಜೆ ನೆರವೇರಿಸಿದರು. ರಾಷ್ಟ್ರಕಲ್ಯಾಣ ಮತ್ತು ಕಂಟಕಗಳ ನಿವಾರಣೆಗೆ ಸಂಕಲ್ಪಿಸಿ ಶ್ರೀ ದುರ್ಗಾಹೋಮ ಮತ್ತು ರಾಷ್ಟ್ರರಕ್ಷಾ ಯಾಗವನ್ನು ನಡೆಸಲಾಯಿತು. ವೇದಬ್ರಹ್ಮ ಶ್ಯಾಮ ಭಟ್ಟರ ನೇತೃತ್ವದ ತಂಡ ಧಾರ್ಮಿಕ ವಿಧಿ ವಿಧಾನಗಳನ್ನು ನಡೆಸಿತು.

ಇತ್ತೀಚೆಗೆ ಹುತಾತ್ಮರಾದ ಕಡೂರು ತಾಲ್ಲೂಕು ಬಿಳವಾಲದ ಗಡಿಭದ್ರತಾ ಪಡೆಯ ಯೋಧ ಶೇಷಣ್ಣ ಅವರ ಕುಟುಂಬದ ಸದಸ್ಯರನ್ನು ಇದೇ ವೇಳೆ ಟ್ರಸ್ಟ್ ವತಿಯಿಂದ ಗೌರವಿಸಿ ಸಹಾಯಧನ ನೀಡಲಾಯಿತು.

ಕೊರೊನಾ ಮಹಾಮಾರಿಯಿಂದ ಜನರನ್ನು ರಕ್ಷಿಸಲು ಶ್ರಮಿಸಿದ 9 ಜನ ಕೊರೊನಾ ವಾರಿಯರ್‍ಗಳನ್ನು ಸನ್ಮಾನಿಸಲಾಯಿತು. ಇದೇ ವೇಳೆ ದಾಸ ಸಾಹಿತ್ಯ ಪ್ರಾಜೆಕ್ಟ್‍ನ ಜಿಲ್ಲಾ ಸಂಚಾಲಕ ಉದಯಸಿಂಹ ನೇತೃತ್ವದ ಭಜನಾ ಮಂಡಳಿಯಿಂದ ಸಾಮೂಹಿಕ ಭಜನೆ, ನಾಮಸಂಕೀರ್ತನೆ ನಡೆದವು.

ಈ ವೇಳೆ ಮಾತನಾಡಿದ ವಂದೇ ಮಾತರಂ ಟ್ರಸ್ಟ್ ನ ಅಧ್ಯಕ್ಷ ಎನ್.ಆರ್.ಪ್ರೀತೇಶ್, ಯುವಜನತೆಯಲ್ಲಿ ರಾಷ್ಟ್ರಭಕ್ತಿ, ದೇಶಪ್ರೇಮ, ಶಿಸ್ತು ಮತ್ತು ಸೇವಾ ಮನೋಭಾವವನ್ನು ಬೆಳೆಸುವುದರ ಜೊತೆಗೆ ವಿವೇಕಾನಂದರ ಆದರ್ಶ ಹಾಗೂ ಅವರ ಸಂದೇಶಗಳನ್ನು ಸಾರ್ವಜನಿಕರಿಗೆ ತಲುಪಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ತಿಳಿಸಿದರು.

ವಂದೇ ಮಾತರಂ ಟ್ರಸ್ಟ್‍ನ ಉಪಾಧ್ಯಕ್ಷ ರೋಹಿತ್, ಕಾರ್ಯದರ್ಶಿ ಡಾ|ವಿನಯ್, ಪದಾಧಿಕಾರಿಗಳಾದ ಭರತ್, ನವೀನ್, ರವೀಶ್, ಶ್ರೀರಾಮಸೇನೆ ಜಿಲ್ಲಾಧ್ಯಕ್ಷ ರಂಜಿತ್‍ಶೆಟ್ಟಿ, ಶಿಕ್ಷಕಿ ಇಂದಿರಾ ಹಾಜರಿದ್ದರು.