ಚಿಕ್ಕಮಗಳೂರು : ಕಡೂರು ಮೆಸ್ಕಾಂ ಇಲಾಖೆಯ ಜ್ಯೂನಿಯರ್ ಇಂಜಿನಿಯರ್ ಲಕ್ಷ್ಮೀದೇವಿ ಅವರ ವರ್ಗಾವಣೆಯನ್ನು ರದ್ದುಗೊಳಿಸುವಂತೆ ಕರ್ನಾಟಕ ದಲಿತ ಸಂಘರ್ಷ ಸಮಿತಿಯ (ಅಂಬೇಡ್ಕರ್ ವಾದ) ಜಿಲ್ಲಾ ಘಟಕ ಒತ್ತಾಯಿಸಿದೆ.
ಮೆಸ್ಕಾಂ ಇಲಾಖೆಯ ಅಧೀಕ್ಷಕ ಇಂಜಿನಿಯರ್ ಎಂ.ಎಸ್.ಮಂಜುನಾಥ್ ಅವರನ್ನು ನಗರದಲ್ಲಿ ಭೇಟಿ ಮಾಡಿದ ಸಮಿತಿಯ ಪದಾಧಿಕಾರಿಗಳು ಈ ಸಂಬಂಧ ಮನವಿ ಸಲ್ಲಿಸಿದರು.
ಲಕ್ಷ್ಮೀದೇವಿ ಅವರು ದಲಿತ ಮಹಿಳೆಯಾಗಿರುವ ಹಿನ್ನೆಲೆಯಲ್ಲಿ ಅವರನ್ನು ಉದ್ದೇಶಪೂರ್ವಕವಾಗಿ ಚಿಕ್ಕಮಗಳೂರಿನಿಂದ ಕಡೂರಿಗೆ, ಕಡೂರಿನಿಂದ ಅಜ್ಜಂಪುರಕ್ಕೆ ವರ್ಗಾವಣೆ ಮಾಡಲಾಗಿದೆ, ಇಲ್ಲಸಲ್ಲದ ಕಾರಣ ನೀಡಿ ನೋಟೀಸ್ ಕೊಡುವುದು ಸೇರಿದಂತೆ ಅವರಿಗೆ ಮಾನಸಿಕವಾಗಿ ಹಿಂಸೆ ನೀಡಲಾಗುತ್ತಿದೆ ಎಂದು ದೂರಿದರು.
ಲಕ್ಷ್ಮೀದೇವಿ ಅವರನ್ನು ವರ್ಗಾಯಿಸಿ ಅದೇ ಜಾಗಕ್ಕೆ ಇನ್ನೋರ್ವ ದಲಿತ ಅಧಿಕಾರಿಯನ್ನು ನೇಮಿಸುವ ಮೂಲಕ ದಲಿತರನ್ನು ಎತ್ತಿಕಟ್ಟಿ ಒಡೆಯುವ ಕೆಲಸವನ್ನು ಮಾಡಲಾಗುತ್ತಿದೆ, ವರ್ಗಾವಣೆ ಸ್ಥಳಕ್ಕೆ ತೆರಳದಿದ್ದಲ್ಲಿ ಕಿರುಕುಳ ನೀಡುವ ಬೆದರಿಕೆ ಹಾಕಲಾಗುತ್ತಿದೆ ಎಂದು ಆರೋಪಿಸಿದರು.
ಲಕ್ಷ್ಮೀದೇವಿ ಅವರು ಮಹಿಳೆಯಾಗಿರುವುದರಿಂದ ವರ್ಗಾವಣೆ ಸ್ಥಳಕ್ಕೆ ಓಡಾಡಲು ಕಷ್ಟವಾಗುವ ಹಿನ್ನೆಲೆಯಲ್ಲಿ ಅವರ ವರ್ಗಾವಣೆಯನ್ನು ರದ್ದುಗೊಳಿಸಬೇಕು ಎಂದು ಆಗ್ರಹಿಸಿದ ಪದಾಧಿಕಾರಿಗಳು ಬೇಡಿಕೆಗೆ ಸ್ಪಂದಿಸದಿದ್ದಲ್ಲಿ ನಗರದ ಮೆಸ್ಕಾಂ ಕಛೇರಿ ಎದುರು ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದರು.
ಮನವಿ ಸ್ವೀಕರಿಸಿ ಮಾತನಾಡಿದ ಅಧೀಕ್ಷಕ ಇಂಜೀನಿಯರ್ ಮಂಜುನಾಥ್, ಕಡೂರು ಮೆಸ್ಕಾಂ ವೃತ್ತ ಬಹಳ ದೊಡ್ಡದಾಗಿದ್ದು, ಕಾರ್ಯದ ಒತ್ತಡ ಹೆಚ್ಚಿರುವುದರಿಂದಾಗಿ ಆ ಜಾಗಕ್ಕೆ ಹೆಚ್ಚಿನ ಕಾರ್ಯಕ್ಷಮತೆ ಇರುವ ಅಧಿಕಾರಿಯನ್ನು ನಿಯುಕ್ತಿಗೊಳಿಸಲಾಗಿದೆ ಎಂದು ತಿಳಿಸಿದರು.
ಮನವಿಯನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಪಧಾನ ಸಂಚಾಲಕ ಮರ್ಲೆ ಅಣ್ಣಯ್ಯ, ತಾಲ್ಲೂಕು ಸಂಚಾಲಕ ರಮೇಶ್, ಮುಖಂಡರಾದ ಮಂಜುನಾಥ್, ವೀರೇಶ್ ಹಾಜರಿದ್ದರು.
Home ಸ್ಥಳಿಯ ಸುದ್ದಿ ಚಿಕ್ಕಮಗಳೂರು : ಕಡೂರು ಮೆಸ್ಕಾಂ ಇಲಾಖೆಯ ಜ್ಯೂನಿಯರ್ ಇಂಜಿನಿಯರ್ ಲಕ್ಷ್ಮೀದೇವಿ ಅವರ ವರ್ಗಾವಣೆಯನ್ನು ರದ್ದುಗೊಳಿಸುವಂತೆ ಒತ್ತಾಯ…










