ಚಿಕ್ಕಮಗಳೂರು : ಜಾನಪದ ನಮ್ಮ ಸಂಸ್ಕೃತಿಯ ತಾಯಿ ಬೇರು : ಹಿರಿಗಯ್ಯ…

270
firstsuddi

ಚಿಕ್ಕಮಗಳೂರು : ಆಧುನೀಕರಣ ಮತ್ತು ಜಾಗತೀಕರಣದಿಂದಾಗಿ ಮೂಲೆ ಗುಂಪಾಗುತ್ತಿರುವ ಜಾನಪದ ಕಲೆ ಮತ್ತು ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಉಳಿಸುವ ಜವಾಬ್ದಾರಿ ವಿದ್ಯಾರ್ಥಿಗಳ ಮೇಲಿದೆ ಎಂದು ಜಿಲ್ಲಾ ಪಂಚಾಯಿತಿ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಹಿರಿಗಯ್ಯ ಹೇಳಿದರು.
ಕೊಪ್ಪ ತಾಲ್ಲೂಕಿನ ಕಮ್ಮರಡಿಯ ಸರ್ಕಾರಿ ಜ್ಯೂನೀಯರ್ ಕಾಲೇಜಿನಲ್ಲಿ ಕರ್ನಾಟಕ ಜಾನಪದ ಪರಿಷತ್‍ನ ತಾಲ್ಲೂಕು ಘಟಕ ಶುಕ್ರವಾರ ಏರ್ಪಡಿಸಿದ್ದ ಜಾನಪದ ಅರಿವು-ತರಬೇತಿ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಜಾನಪದ ನಮ್ಮ ಸಂಸ್ಕೃತಿಯ ತಾಯಿ ಬೇರು, ಜಾನಪದ ಕಲೆ ಮತ್ತು ಸಂಸ್ಕೃತಿಯಿಂದಾಗಿ ಜಗತ್ತಿನಲ್ಲಿ ನಮ್ಮ ದೇಶಕ್ಕೆ ಗೌರವ ಲಭಿಸಿದೆ. ಆಧುನೀಕರಣ ಮತ್ತು ಜಾಗತೀಕರಣದ ನಾಗಾಲೋಟದಲ್ಲಿ ನಮ್ಮ ಯುವಜನತೆ ಗ್ರಾಮೀಣ ಸಂಸ್ಕೃತಿಯನ್ನು ಮರೆತಿದ್ದಾರೆ ಇದರಿಂದಾಗಿ ಜಾನಪದ ನಶಿಸುತ್ತಿದೆ, ಎಂದ ಅವರು ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಜಾನಪದ ಕಲೆ ಮತ್ತು ಸಂಸ್ಕೃತಿಯನ್ನು ಮೈಗೂಡಿಸಿಕೊಂಡರೆ ಮಾತ್ರ ಅದು ಮುಂದಿನ ಪೀಳಿಗೆಗೆ ಉಳಿಯುತ್ತದೆ ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕೊಪ್ಪ ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಜಯಂತಿ ನಾಗರಾಜ್ ಸಾಂಸ್ಕೃತಿಕ ಕಲೆಗಳಿಗೆ ಮೂಲ ಜಾನಪದ, ಜಗತ್ತಿನ ಎಲ್ಲಾ ಕಲೆಗಳೂ ಜಾನಪದದ ಪ್ರಾಕಾರಗಳಿಂದ ಹುಟ್ಟಿವೆ, ಇಂತಹ ಕಲೆ ಮತ್ತು ಸಂಸ್ಕೃತಿಯನ್ನು ಇಂದಿನ ಯುವಜನತೆ ಮೈಗೂಡಿಸಿಕೊಳ್ಳದಿದ್ದಲ್ಲಿ ಮುಂದಿನ ತಲೆಮಾರು ಪ್ರಪಂಚದೆದುರು ಬರಿಗೈಯಲ್ಲಿ ನಿಲ್ಲಬೇಕಾಗುತ್ತದೆ ಎಂದು ಎಚ್ಚರಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾಧ್ಯಕ್ಷ ಜಿ.ಬಿ ಸುರೇಶ್ ಜಾನಪದ ಕಲೆ ಮತ್ತು ಸಂಸ್ಕೃತಿಯ ಕುರಿತು ವಿದ್ಯಾರ್ಧಿಗಳಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಮಲೆನಾಡ ಜಾನಪದದ ಅಳಿವು-ಉಳಿವು ವಿಷಯ ಕುರಿತು ತೀರ್ಥಹಳ್ಳಿಯ ಜಾನಪದ ಕಲಾವಿದ ಮೋಹನ್ ಮುನ್ನೂರು ಉಪನ್ಯಾಸ ನೀಡಿದರು. ತಾ.ಪಂ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಕಿರಣ್ ಮಡಬೆಳ್ಳಿ, ಗ್ರಾ.ಪಂ ಅಧ್ಯಕ್ಷ ಚಂದ್ರಕಾಂತ ಹೆಗ್ಡೆ, ಕರ್ನಾಟಕ ಜಾನಪದ ಪರಿಷತ್‍ನ ತಾಲ್ಲೂಕು ಅಧ್ಯಕ್ಷ ಹೆಚ್.ಎಸ್ ಜಗದೀಶ್ ಮಾತನಾಡಿದರು.
ಜಾನಪದ ಕಲಾವಿದ ಪ್ರವೀಣ್ ಹಾಲಮತ್ತೂರು, ಪ್ರಾಂಶುಪಾಲ ಶಂಕರನಾರಾಯಣ. ಕೃಷ್ಣಮೂರ್ತಿ ಹೆಗ್ಡೆ ಉಪಸ್ಥಿತರಿದ್ದರು, ಸಮಾರಂಭದ ನಂತರ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.