ಚಿಕ್ಕಮಗಳೂರು : ಬೆಳಕಿನ ಹಬ್ಬ ದೀಪಾವಳಿ ಅಂಗವಾಗಿ ನಗರದ ಇತಿಹಾಸ ಪ್ರಸಿದ್ಧ ಶ್ರೀ ಬೋಳರಾಮೇಶ್ವರ ದೇವಾಲಯದಲ್ಲಿ ನಿನ್ನೆ ಗೋಮಾತೆಗೆ ವಿಶೇಷ ಪೂಜೆ ಸಲ್ಲಿಸಲಾಯಿತು.
ತಹಶೀಲ್ದಾರ್ ಡಾ|| ಕೆ.ಜೆ.ಕಾಂತರಾಜ್ ಅವರು ಸಂಜೆ ಗೋಧೂಳಿ ಲಗ್ನದಲ್ಲಿ ಪೂಜೆ ಸಲ್ಲಿಸುವುದರ ಜೊತೆಗೆ ಅಕ್ಕಿ, ಬೆಲ್ಲ, ಹಣ್ಣು ಮತ್ತು ಸಿಹಿಯನ್ನು ಗೋಮಾತೆಗೆ ಸಮರ್ಪಿಸಿದರು.
ಮಹಾಮಂಗಳಾರತಿ ನಂತರ ಭಕ್ತರಿಗೆ ಸಿಹಿ ವಿತರಿಸಲಾಯಿತು. ದೇವಾಲಯದ ಪ್ರಧಾನ ಅರ್ಚಕ ಡಿ.ಆರ್.ಕುಮಾರಸ್ವಾಮಿ ಅವರು ಗೋಪೂಜೆಯ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿದರು.
ಈ ವೇಳೆ ಮಾತನಾಡಿದ ತಹಶೀಲ್ದಾರ್ ಡಾ|| ಕೆ.ಜೆ.ಕಾಂತರಾಜ್ ಸರ್ಕಾರದ ಸೂಚನೆಯ ಮೇರೆಗೆ ದತ್ತಪೀಠ ಸೇರಿದಂತೆ ತಾಲ್ಲೂಕಿನಲ್ಲಿರುವ ಎಲ್ಲಾ 448 ಮುಜರಾಯಿ ದೇವಾಲಯಗಳಲ್ಲೂ ಇಂದು ಗೋಪೂಜೆ ನೆರವೇರಿಸಲಾಗಿದೆ ಎಂದು ತಿಳಿಸಿದರು.
ಮುಜರಾಯಿ ಇಲಾಖೆ ಅಧಿಕಾರಿ ಶ್ರೀನಿವಾಸ್, ಪಶುವೈದ್ಯಕೀಯ ಪರೀಕ್ಷಕ ಪರಮೇಶ್ ಹಾಜರಿದ್ದರು. ಬೆಳಕಿನ ಹಬ್ಬ ದೀಪಾವಳಿ ಪ್ರಯುಕ್ತ ದೇವಾಲಯದಲ್ಲಿ ಮೂರು ದಿನಗಳ ಕಾಲ ವಿಶೇಷ ಪೂಜೆ, ಅಲಂಕಾರ ನಡೆದವು.










