ಚಿಕ್ಕಮಗಳೂರು : ದೇಶ, ರಾಷ್ಟ್ರಧ್ವಜ ಮತ್ತು ರಾಷ್ಟ್ರಗೀತೆಗೆ ಗೌರವ ನೀಡುವುದನ್ನು ವಿದ್ಯಾರ್ಥಿಗಳು ಕಲಿಯಬೇಕು : ಜಗದೀಶಾಚಾರ್…

501
firstsuddi

ಚಿಕ್ಕಮಗಳೂರು : ದೇಶ, ರಾಷ್ಟ್ರಧ್ವಜ ಮತ್ತು ರಾಷ್ಟ್ರಗೀತೆಗೆ ಗೌರವ ನೀಡುವುದನ್ನು ವಿದ್ಯಾರ್ಥಿಗಳು ಕಲಿಯಬೇಕು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಜಗದೀಶಾಚಾರ್ ಸಲಹೆ ಮಾಡಿದರು.
ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ವಿವಿಧ ಶಾಲೆಗಳ ವಿದ್ಯಾರ್ಥಿಗಳಿಗೆ ಭಾರತ ಸೇವಾದಳದ ಜ್ಞಾನಜ್ಯೋತಿ ಘಟಕ ನಗರದ ಆಜಾದ್ ಪಾರ್ಕ್ ಶಾಲೆಯಲ್ಲಿ ಶನಿವಾರ ಏರ್ಪಡಿಸಿದ್ದ ರಾಷ್ಟ್ರಧ್ವಜ ಮತ್ತು ರಾಷ್ಟ್ರಗೀತೆ ಕುರಿತ ತರಬೇತಿ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಜನನಿ ಮತ್ತು ಜನ್ಮಭೂಮಿ ಸ್ವರ್ಗಕ್ಕಿಂತ ಮಿಗಿಲಾದದ್ದು ಅದನ್ನು ಯಾವುದೇ ಕಾರಣಕ್ಕೂ ಕಡೆಗಣಿಸಬಾರದು, ದೇಶ, ರಾಷ್ಟ್ರಧ್ವಜ ಮತ್ತು ರಾಷ್ಟ್ರಗೀತೆಗೆ ಅಗೌರವ ತೋರಬಾರದು ಎಂದು ಕಿವಿಮಾತು ಹೇಳಿದರು.
ನಮ್ಮ ಯುವಜನತೆ ದೇಶಭಕ್ತಿ ಮತ್ತು ರಾಷ್ಟ್ರಪ್ರೇಮವನ್ನು ಮೈಗೂಡಿಸಿಕೊಂಡು ಸಮರ್ಪಣಾ ಮನೋಭಾವದಿಂದ ದುಡಿದರೆ ಮಾತ್ರ ದೇಶದ ಅಭಿವೃದ್ದಿಯಾಗುವುದು ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಭಾರತ ಸೇವಾದಳದ ತಾಲ್ಲೂಕು ಸಂಘಟಕ ಎಸ್.ಈ.ಲೋಕೇಶ್ವರಾಚಾರ್ ರಾಷ್ಟ್ರಗೀತೆ ಮತ್ತು ರಾಷ್ಟ್ರಧ್ವಜ ಕುರಿತ ತರಬೇತಿ ಶಿಬಿರವನ್ನು ಸೇವಾದಳ ಕಳೆದ 30 ವರ್ಷಗಳಿಂದ ನಡೆಸುತ್ತಾ ಬಂದಿದೆ ಎಂದರು.
ಶಿಬಿರದಲ್ಲಿ ವಿವಿಧ ಶಾಲೆಗಳ ವಿದ್ಯಾರ್ಥಿಗಳಿಗೆ ರಾಷ್ಟ್ರಗೀತೆಯನ್ನು ಕ್ರಮಬದ್ದವಾಗಿ ಹಾಡುವುದು, ರಾಷ್ಟ್ರಧ್ವಜವನ್ನು ಕಟ್ಟುವ ವಿಧಾನ, ಧ್ವಜಕ್ಷೇತ್ರ ನಿರ್ಮಾಣ ಮಾಡುವುದನ್ನು ಕಲಿಸಲಾಗುವುದು ಎಂದು ತಿಳಿಸಿದರು.
ಮುಖ್ಯಶಿಕ್ಷಕಿ ಬಿ.ಆರ್.ಗೀತಾ ಅಧ್ಯಕ್ಷತೆ ವಹಿಸಿದ್ದರು, ತಾಲ್ಲೂಕು ದೈಹಿಕ ಶಿಕ್ಷಕರ ಸಂಘದ ಖಜಾಂಚಿ ಕುಮಾರಸ್ವಾಮಿ, ಭಾರತ ಸೇವಾದಳದ ಜಿಲ್ಲಾ ಸಂಘಟಕ ಚಂದ್ರಕಾಂತ್, ಕುಮಾರಪ್ಪ, ಶಿಕ್ಷಕಿ ಗೀತಾ ಉಪಸ್ಥಿತರಿದ್ದರು.