ಚಿಕ್ಕಮಗಳೂರು : ನೂತನ ಭೂ ಸುಧಾರಣಾ ಕಾಯ್ದೆಯನ್ನು ಜಾರಿಗೊಳಿಸಬಾರದು ಎಂದು ಕಿಸಾನ್ ಕಾಂಗ್ರೆಸ್ ಜಿಲ್ಲಾ ಘಟಕದಿಂದ ರಾಜ್ಯ ಸರ್ಕಾರಕ್ಕೆ ಒತ್ತಾಯ…

154
firstsuddi

ಚಿಕ್ಕಮಗಳೂರು : ರೈತರ ಬದುಕಿಗೆ ಮಾರಕವಾಗಿರುವ ನೂತನ ಭೂ ಸುಧಾರಣಾ ಕಾಯ್ದೆಯನ್ನು ಯಾವುದೇ ಕಾರಣಕ್ಕೂ ಜಾರಿಗೊಳಿಸಬಾರದು ಎಂದು ಕಿಸಾನ್ ಕಾಂಗ್ರೇಸ್‍ನ ಜಿಲ್ಲಾ ಘಟಕ ರಾಜ್ಯ ಸರ್ಕಾರವನ್ನು ಒತ್ತಾಯಿಸಿದೆ.
ಜಿಲ್ಲಾಧಿಕಾರಿ ಡಾ|| ಬಗಾಧಿ ಗೌತಂ ಹಾಗೂ ತಹಸೀಲ್ದಾರ್ ಕಾಂತರಾಜು ಅವರನ್ನು ಭೇಟಿ ಮಾಡಿದ ಸಮಿತಿಯ ಪದಾಧಿಕಾರಿಗಳು ಈ ಸಂಬಂಧ ಮನವಿ ಸಲ್ಲಿಸಿದರು.
ಅತಿವೃಷ್ಠಿ, ಅನಾವೃಷ್ಠಿ, ಬೆಲೆ ಕುಸಿತ ಮತ್ತು ಲಾಕ್‍ಡೌನ್‍ನಿಂದಾಗಿ ರೈತರು ಆರ್ಥಿಕವಾಗಿ ಈಗಾಗಲೇ ಜರ್ಝರಿತರಾಗಿದ್ದಾರೆ ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲಿ ಭೂ ಸುಧಾರಣಾ ಕಾಯ್ದೆಯನ್ನು ಜಾರಿಗೆ ತಂದರೆ ಶ್ರೀಮಂತರು ಮತ್ತು ಉದ್ಯಮಿಗಳಿಗೆ ರೈತರ ಭೂಮಿ ಖರೀದಿಸಲು ಅವಕಾಶವಾಗುತ್ತದೆ ಎಂದು ಹೇಳಿದರು.
ಶ್ರೀಮಂತರು ಮತ್ತು ಉದ್ಯಮಿಗಳು ರೈತರ ಭೂಮಿಯನ್ನು ಖರೀದಿಸಿದರೆ ಈಗ ಭೂಮಿಯ ಒಡೆಯರಾಗಿರುವ ಬಡ ರೈತರು ಮುಂದೊಂದು ದಿನ ಭೂಮಿಯನ್ನು ಕಳೆದುಕೊಂಡು ಕೃಷಿ ಕಾರ್ಮಿಕರಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.
ರೈತರ ಹಕ್ಕನ್ನು ಕಸಿದುಕೊಂಡಿರುವ ಎಪಿಎಂಸಿ ನೂತನ ಕಾಯ್ದೆಯನ್ನು ತಕ್ಷಣ ರದ್ದುಪಡಿಸಬೇಕು ಎಂದು ಆಗ್ರಹಿಸಿದರು.
ಕಿಸಾನ್ ಕಾಂಗ್ರೇಸ್‍ನ ಜಿಲ್ಲಾ ಕಾರ್ಯಾಧ್ಯಕ್ಷ ಡಿ.ಎಂ.ವಿಜಯ್, ಆಲ್ದೂರು ಹೋಬಳಿ ಅಧ್ಯಕ್ಷ ಸಿ.ಸಿ.ಈರೇಗೌಡ, ಜಿಲ್ಲಾ ನಿರ್ದೇಶಕ ನಿಂಗೇಗೌಡ, ಕೆಂಚೇಗೌಡ ಹಾಜರಿದ್ದರು.