ಚಿತ್ರನಟ ಮಾಸ್ಟರ್ ಆನಂದ್‌ಗೆ 18.50 ಲಕ್ಷ ವಂಚನೆ- ದೂರು ದಾಖಲು…

83
firstsuddi

ನಟ, ನಿರ್ಮಾಪಕ, ನಿರ್ದೇಶಕ ಮಾಸ್ಟರ್ ಆನಂದ್‌ ಅವರಿಗೆ ನಿವೇಶನ ನೀಡುವುದಾಗಿ ಮಲ್ಟಿ ಲೀಪ್ ವೆಂಚರ್ಸ್ ಹೆಸರಿನ ಕಂಪನಿಯು 18.50 ಲಕ್ಷ ರೂಪಾಯಿ ವಂಚನೆ ಮಾಡಿದೆ ಎಂದು ಕಂಪನಿ ವಿರುದ್ದ ಮಾಸ್ಟರ್ ಆನಂದ್ ಚಂದ್ರಲೇಔಟ್ ಠಾಣೆಯಲ್ಲಿ ದೂರು ನೀಡಿದ್ದಾರೆ.

2020ರ ಸೆಪ್ಟೆಂಬರ್​​ನಿಂದ 2021ರ ಅಕ್ಟೋಬರ್ ಅವಧಿಯಲ್ಲಿ ಈ ವಂಚನೆ ನಡೆದಿದೆ. ಬೆಂಗಳೂರಿನ ಕೊಮ್ಮಘಟ್ಟದ ರಾಮಸಂದ್ರ ಗ್ರಾಮದಲ್ಲಿ ಆನಂದ್ ಶೂಟಿಂಗ್​ಗಾಗಿ ತೆರಳಿದ್ದ ವೇಳೆ ನಿವೇಶನಗಳನ್ನು ನೋಡಿದ್ದರು. ಮನಿಕಾ ಕೆ.ಎಂ ಅವರಿಂದ ನಿವೇಶನ ಖರೀದಿಸಲು ಸಾಲ ಸೌಲಭ್ಯ ಇರುವುದಾಗಿ ಹೇಳಿದ್ದರು . ಆ ಬಳಿಕ ರಾಮಸಂದ್ರದ 2000 ಅಡಿ ವಿಸ್ತೀರ್ಣದ ನಿವೇಶನವನ್ನು ಮಲ್ಟಿ ಲೀಪ್ ವೆಂಚರ್ಸ್ ಕಂಪನಿ ತೋರಿಸಿದ್ದರು. 70 ಲಕ್ಷಕ್ಕೆ ಖರೀದಿ ಒಪ್ಪಂದವಾಗಿ ಹಂತ ಹಂತವಾಗಿ 18.50 ಲಕ್ಷ ಮುಂಗಡ ಹಣವನ್ನು ಕಂಪನಿಗೆ ನೀಡಿದ್ದು, ಕಂಪನಿಯು ಮಾಸ್ಟರ್ ಆನಂದ್ ಹಾಗು ಪತ್ನಿ ಯಶಸ್ವಿನಿ ಹೆಸರಲ್ಲಿ ಖರೀದಿ ಕರಾರು ಪತ್ರವನ್ನು ಮಾಡಿಕೊಟ್ಟಿತ್ತು.

ಈ ನಡುವೆ ನಿವೇಶನವನ್ನು ಕಂಪನಿ ಬೇರೆಯವರಿಗೆ ಮಾರಾಟ ಮಾಡಿತ್ತು. ಈ ಬಗ್ಗೆ ವಿಚಾರಿಸಿದಾಗ ಯಾವುದೇ ಸ್ಪಂದನೆ ಸಹ ನೀಡದೆ ಮುಂಗಡ ಹಣ ಸಹ ವಾಪಸ್ ಮಾಡಿರಲಿಲ್ಲ ಎಂದು ವಂಚನೆ ಬಗ್ಗೆ ಚಂದ್ರಲೇಔಟ್ ಠಾಣೆಯಲ್ಲಿ ಮಾಸ್ಟರ್ ಆನಂದ್ ದೂರು ನೀಡಿದ್ದಾರೆ. ಬಿಯುಡಿಎಸ್ (ಅನಿಯಂತ್ರಿತ ಉಳಿತಾಯ ಯೋಜನೆಗಳ ನಿಷೇಧ ಕಾಯ್ದೆ ) ಕಾಯ್ದೆ 2019ರ ಅಡಿ ಆರೋಪಿಗಳ ವಿರುದ್ದ ಎಫ್ ಐ ಆರ್ ದಾಖಲು ಮಾಡಲಾಗಿದೆ.