ನವದೆಹಲಿ : ಜಪಾನ್ ಮಾಜಿ ಪ್ರಧಾನಿ ಶಿಂಜೋ ಅಬೆ ಅವರು ಗುಂಡಿನ ದಾಳಿಗೊಳಗಾಗಿ ಅಸುನೀಗಿದ್ದಾರೆ. ಅವರ ನಿಧನಕ್ಕೆ ಕಂಬನಿ ಮಿಡಿದ ಪ್ರಧಾನಿ ನರೇಂದ್ರ ಮೋದಿ ಅವರು, ಗೌರವಾರ್ಥವಾಗಿ ನಾಳೆ ಭಾರತದಲ್ಲಿ ಶೋಕಾಚರಣೆ ಘೋಷಣೆ ಮಾಡಿದ್ದಾರೆ.
ಈ ಬಗ್ಗೆ ಟ್ವಿಟರ್ ನಲ್ಲಿ ಮಾಹಿತಿ ಹಂಚಿಕೊಂಡಿರುವ ಮೋದಿ, ಮಾಜಿ ಪ್ರಧಾನಿ ಅಬೆ ಶಿಂಜೋ ಅವರಿಗೆ ನಮ್ಮ ಗೌರವದ ಸಂಕೇತವಾಗಿ, 9 ಜುಲೈ 2022 ರಂದು ಒಂದು ದಿನದ ರಾಷ್ಟ್ರೀಯ ಶೋಕಾಚರಣೆ ಆಚರಿಸಲಾಗುತ್ತದೆ ಎಂದು ತಿಳಿಸಿದ್ದಾರೆ.
ಅಬೆ ಅವರೊಂದಿಗಿನ ನನ್ನ ಒಡನಾಟ ಹಲವು ವರ್ಷಗಳ ಹಿಂದಿನದು. ನಾನು ಗುಜರಾತ್ ಸಿಎಂ ಆಗಿದ್ದಾಗ ಅವರನ್ನು ಪರಿಚಯ ಮಾಡಿಕೊಂಡಿದ್ದೆ. ನಾನು ಪ್ರಧಾನಿಯಾದ ಬಳಿಕವೂ ನಮ್ಮ ಸ್ನೇಹ ಮುಂದುವರಿಯಿತು. ಆರ್ಥಿಕತೆ ಮತ್ತು ಜಾಗತಿಕ ವ್ಯವಹಾರಗಳ ಬಗ್ಗೆ ಅವರ ತೀಕ್ಷ್ಣವಾದ ಒಳನೋಟ ಯಾವಾಗಲೂ ನನ್ನ ಮೇಲೆ ಆಳವಾದ ಪ್ರಭಾವ ಬೀರಿತ್ತು. ನನ್ನ ಇತ್ತೀಚಿನ ಜಪಾನ್ ಪ್ರವಾಸದ ಸಂದರ್ಭದಲ್ಲಿ ಅಬೆ ಅವರನ್ನು ಮತ್ತೊಮ್ಮೆ ಭೇಟಿ ಮಾಡಲು ಹಾಗೂ ಅನೇಕ ವಿಷಯಗಳನ್ನು ಚರ್ಚಿಸಲು ನನಗೆ ಅವಕಾಶ ಸಿಕ್ಕಿತು. ಅವರು ಎಂದಿನಂತೆ ಬುದ್ಧಿವಂತ ಮತ್ತು ಒಳನೋಟವುಳ್ಳವರಾಗಿದ್ದರು. ಆದರೆ ಅದು ನಮ್ಮ ಕೊನೆಯ ಸಭೆ ಎಂದು ನನಗೆ ತಿಳಿದಿರಲಿಲ್ಲ ಎಂದು ಆಘಾತ ವ್ಯಕ್ತಪಡಿಸಿದರು.










