ನವದೆಹಲಿ : ಹನುಮ ಜಯಂತಿ ವೇಳೆ ಹಿಂಸಾಚಾರಕ್ಕೆ ಸಾಕ್ಷಿಯಾಗಿದ್ದ ದೆಹಲಿಯ ಜಹಾಂಗೀರ್‌ಪುರಿಯಲ್ಲಿ ಉತ್ತರ ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ ನಡೆಸುತ್ತಿದ್ದ ಅಕ್ರಮ ಒತ್ತುವರಿ ತೆರವು ಕಾರ್ಯಾಚರಣೆಗೆ ಸುಪ್ರೀಂ ಕೋರ್ಟ್ ತಡೆ ನೀಡಿದೆ.
ಹಿರಿಯ ವಕೀಲರಾದ ದುಷ್ಯಂತ್ ದೇವ್, ಕಪಿಲ್ ಸಿಬಲ್, ಪಿ.ವಿ.ಸುರೇಂದ್ರನಾಥ್ ಹಾಗೂ ಪ್ರಶಾಂತ್ ಭೂಷಣ್ ಅವರು ಪ್ರಕರಣಕ್ಕೆ ಸಂಬಂಧಿಸಿದಂತೆ ಗಲಭೆಪೀಡತ ಜಹಾಂಗೀರ್ಪುರಿಯಲ್ಲಿ ಪಾಲಿಕೆ ನಡೆಸುತ್ತಿರುವ ಕಾರ್ಯಾಚರಣೆ ಕಾನೂನುಬಾಹಿರವಾಗಿದೆ. ಈ ಸಂಬಂಧ ಯಾರಿಗೂ ಯಾವುದೇ ನೋಟಿಸ್ ನೀಡಿಲ್ಲ ಎಂದು ಸ್ಪಷ್ಟಪಡಿಸಿದರು.
ನಂತರ ಸಿಜೆಐ ನ್ಯಾ. ಎನ್ ವಿ ರಮಣ ಅವರಿದ್ದ ಪೀಠ, ಕಾರ್ಯಾಚರಣೆ ನಡೆಯುತ್ತಿದ್ದ ಜಹಂಗಿರ್ ಪುರಿ ಪ್ರದೇಶದಲ್ಲಿ, ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಆದೇಶಿಸಿದ್ದು, ಕಾರ್ಯಾಚರಣೆಯನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಯನ್ನು ಸೂಕ್ತ ಪೀಠಕ್ಕೆ ವರ್ಗಾವಣೆ ಮಾಡಲಾಗುತ್ತದೆ ಎಂದು ಹೇಳಿದದರು. ಪ್ರಕರಣದ ವಿಚಾರಣೆಯನ್ನು ನಾಳೆಗೆ ಮುಂದೂಡಿದರು.
ಕಳೆದ ಶನಿವಾರ ಹನುಮ ಜಯಂತಿ ಮೆರವಣಿಗೆ ಸಂದರ್ಭದಲ್ಲಿ ಎರಡು ಸಮುದಾಯಗಳ ನಡುವೆ ಹಿಂಸಾಚಾರ ಉಂಟಾದ ದೆಹಲಿಯ ಜಹಾಂಗೀರ್‌ಪುರಿ ಪ್ರದೇಶದಲ್ಲಿ ಗಲಭೆಕೋರರಿಗೆ ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಮಾದರಿಯಲ್ಲಿ ಬಿಸಿ ಮುಟ್ಟಿಸಲು ಬಿಜೆಪಿ ನೇತೃತ್ವದ ಪಾಲಿಕೆ ಮುಂದಾಗಿತ್ತು. ಪೊಲೀಸ್ ಬಿಗಿ ಬಂದೋಬಸ್ತ್ ನೊಂದಿಗೆ ಕಾರ್ಪೊರೇಷನ್ ನೆಲಸಮ ಕಾರ್ಯಾಚರಣೆಯನ್ನು ಚುರುಕುಗೊಳಿಸಿತ್ತು.










