ನವದೆಹಲಿ: ಕೆಲವರು ಜಾತಿ ರಾಜಕೀಯ ಹೆಸರಿನಲ್ಲಿ ವಿಷ ಹರಡುವ ಮೂಲಕ ಶಾಂತಿ ಕದಡುವ ಯತ್ನವನ್ನು ಮಾಡುತ್ತಿದ್ದಾರೆ. ಗ್ರಾಮದಲ್ಲಿ ಸಾಮರಸ್ಯ ಮತ್ತು ಶಾಂತಿ ಬಲಗೊಳಿಸುವಲ್ಲಿ ನಾವು ಕಾರ್ಯ ನಿರ್ವಹಿಸಬೇಕಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ದೆಹಲಿಯ ಭಾರತ್ ಮಂಟಪ್‍ನಲ್ಲಿ ಗ್ರಾಮೀಣ ಭಾರತ್ ಮಹೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, 2014ರಲ್ಲಿ ಪ್ರಧಾನಿಯಾದಾಗಿನಿಂದ ಪ್ರತಿ ಕ್ಷಣವೂ ಗ್ರಾಮೀಣ ಭಾರತ ಸಬಲೀಕರಣಕ್ಕೆ ನಿರಂತರವಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ ಎಂದು ಹೇಳಿದರು. 2025ರ ವರ್ಷದ ಆರಂಭದಲ್ಲೇ ಗ್ರಾಮೀಣ ಭಾರತ್ ಮಹೋತ್ಸವ್ ಬೃಹತ್ ಕಾರ್ಯಕ್ರಮವನ್ನು ಭಾರತದ ಅಭಿವೃದ್ಧಿ ಕಾರ್ಯಕ್ರಮದಲ್ಲಿ ಪರಿಚಯಿಸಲಾಗಿದೆ. ಇದು ಹೊಸ ಗುರುತು ಸೃಷ್ಟಿಸಲಿದ್ದು, ಈ ಕಾರ್ಯಕ್ರಮ ಆಯೋಜಿಸಿದ್ದಕ್ಕೆ ನಬಾರ್ಡ್ ಮತ್ತು ಇತರೆ ಉದ್ಯೋಗಿಗಳಿಗೆ ಶುಭಾಶಯ ತಿಳಿಸಿದರು. ಗ್ರಾಮೀಣ ಪ್ರದೇಶಗಳು ಎದುರಿಸುತ್ತಿರುವ ಸವಾಲಿನ ನಡುವೆ ನಾನು ನನ್ನ ಬಾಲ್ಯವನ್ನು ಗ್ರಾಮೀಣ ಪ್ರದೇಶದಲ್ಲಿ ಕಳೆದಿದ್ದು, ಇದರಿಂದಾಗಿ ಅಲ್ಲಿನ ಸವಾಲುಗಳನ್ನು ಎದುರಿಸುವುದು ಕಲಿತೆ ಹಾಗೇ ಅವರ ಸಾಮಥ್ರ್ಯ ತಿಳಿದುಕೊಂಡೆ ಎಂದರು. ಗ್ರಾಮೀಣ ಪ್ರದೇಶದ ಜನರು ಕಠಿಣ ಶ್ರಮದ ಹೊರತಾಗಿ ಅವರು ಸೀಮಿತ ಸೌಲಭ್ಯದಿಂದಾಗಿ ಅವಕಾಶದ ಕೊರತೆಯನ್ನು ಎದುರಿಸುತ್ತಿದ್ದಾರೆ ಎಂದು ತಿಳಿಸಿದರು. 2014ರಿಂದ ನಾನು ಕಚೇರಿ ಅಧಿಕಾರ ವಹಿಸಿಕೊಂಡಾಗಿನಿಂದಾಗಲೂ ಪ್ರತಿ ಘಳಿಗೆ ಗ್ರಾಮೀಣ ಭಾರತದ ಸೇವೆಗಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ. ಗ್ರಾಮೀಣ ಜನರಿಗೆ ಘನತೆಯ ಬದುಕು ರೂಪಿಸುವುದು ನಮ್ಮ ಸರ್ಕಾರದ ಮೊದಲ ಆದ್ಯತೆ ಆಗಿದೆ. ನಮ್ಮ ಗುರಿ ಗ್ರಾಮೀಣ ಭಾರತವನ್ನು ಸಬಲೀಕರಣಗೊಳಿಸುವುದಾಗಿದೆ. ಅವರಿಗೆ ಅವಕಾಶಗಳ ನೀಡುವ ಮೂಲಕ ಮುನ್ನಡೆ ಸಾಧಿಸಲು ಸಹಾಯ ಮಾಡಿ, ವಲಸೆ ತಪ್ಪಿಸಿ, ಆರಾಮದಾಯಕ ಬದುಕು ಕಲ್ಪಿಸುವುದಾಗಿದೆ. ಇದನ್ನು ಸಾಧಿಸಲು ನಾವು ಪ್ರತಿ ಗ್ರಾಮದಲ್ಲಿ ಮೂಲಭೂತ ಸೌಲಭ್ಯದ ಖಾತ್ರಿಯ ಪ್ರಚಾರವನ್ನು ಪ್ರಾರಂಭಿಸಿದ್ದು ಎಂದು ಹೇಳಿದರು.










