ಜಾನಪದ ಕಲೆ, ಸಾಹಿತ್ಯ, ಸಂಸ್ಕೃತಿಯನ್ನು ಇಂದಿನ ಯುವಜನತೆಗೆ ಕಲಿಸುವ ಅಗತ್ಯವಿದೆ – ಚಟ್ನಹಳ್ಳಿ ಮಹೇಶ್.

65
firstsuddi

ಚಿಕ್ಕಮಗಳೂರು: ಜಾನಪದ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಯನ್ನು ನಗರ ಪ್ರದೇಶದ ಜನರಿಗೆ ವಿಶೇಷವಾಗಿ ಇಂದಿನ ಯುವಜನತೆಗೆ ಕಲಿಸುವ ಅಗತ್ಯವಿದೆ ಎಂದು ಸಾಹಿತಿ ಚಟ್ನಹಳ್ಳಿ ಮಹೇಶ್ ಹೇಳಿದರು.

ಕರ್ನಾಟಕ ಜಾನಪದ ಪರಿಷತ್ ಕಡೂರು ತಾಲೂಕಿನ ಆಣೆಗೆರೆಯಲ್ಲಿ ಶನಿವಾರ ಆಯೋಜಿಸಿದ್ದ ಪಂಚನಹಳ್ಳಿ ಹೋಬಳಿ ಮಟ್ಟದ ಜಾನಪದ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ನಮ್ಮ ಮೂಲ ಜಾನಪದ ಕಲೆ, ಸಾಹಿತ್ಯ, ಸಂಸ್ಕೃತಿ, ಆಧುನಿಕತೆಯ ನಡುವೆಯೂ ಗ್ರಾಮೀಣ ಭಾಗದಲ್ಲಿ ಇಂದಿಗೂ ಜೀವಂತವಾಗಿದೆ. ಇದಕ್ಕೆ ಮೂಲ ಕಾರಣ ಗ್ರಾಮೀಣರ ಬದುಕಿನಲ್ಲಿ ಜಾನಪದ ಹಾಸು ಹೊಕ್ಕಾಗಿರುವುದು ಎಂದರು.

ಈ ಹಿನ್ನೆಲೆಯಲ್ಲಿ ನಗರ ಪ್ರದೇಶದ ಜನರಿಗೆ ಮತ್ತು ವಿಶೇಷವಾಗಿ ಯುವಜನತೆಗೆ ಜಾನಪದ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಹಾಗೂ ಅವುಗಳ ಮೌಲ್ಯಗಳನ್ನು ತಿಳಿಸುವ ಕೆಲಸವಾಗಬೇಕು ಎಂದು ಸಲಹೆ ನೀಡಿದರು.

ಪ್ರಧಾನ ಉಪನ್ಯಾಸ ನೀಡಿದ ಸಾಹಿತಿ ಮಮತೇಶ್, ಜಾನಪದ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಎಲ್ಲರೂ ಮೈಗೂಡಿಸಿಕೊಳ್ಳುವ ಮೂಲಕ ನಮ್ಮ ತನವನ್ನು ಮೆರೆಯಬೇಕು ಎಂದು ಕಿವಿ ಮಾತು ಹೇಳಿದರು.

ಆಶಯ ನುಡಿಗಳನ್ನಾಡಿದ ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾಧ್ಯಕ್ಷ ಜಿ.ಬಿ. ಸುರೇಶ್, ಭಾರತೀಯ ಸಂಸ್ಕೃತಿ ಮತ್ತು ಜಾನಪದ ಸಂಸ್ಕೃತಿ ಎರಡೂ ಒಂದೇ ನಾಣ್ಯದ ಎರಡು ಮುಖಗಳಾಗಿದ್ದು, ಜಾನಪದ ನಾಶವಾದರೆ ದೇಶದ ಸಂಸ್ಕೃತಿಯೂ ನಾಶವಾಗುತ್ತದೆ ಎಂದು ಎಚ್ಚರಿಸಿದರು.

ಆಧುನಿಕತೆಯ ಅಬ್ಬರದಲ್ಲಿ ಮರೆಯಾಗುತ್ತಿರುವ ಜಾನಪದ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕರ್ನಾಟಕ ಜಾನಪದ ಪರಿಷತ್ ಜಿಲ್ಲೆ ತಾಲೂಕು ಹೋಬಳಿಗಳಲ್ಲಿ ನಿರಂತರವಾಗಿ ಕಾರ್ಯಕ್ರಮಗಳನ್ನು ನಡೆಸುತ್ತಿದೆ ಎಂದು ತಿಳಿಸಿದರು.

ಸಮ್ಮೇಳನಾಧ್ಯಕ್ಷ ಪಂಚನಹಳ್ಳಿ ಲೋಕೇಶ್ ಮಾತನಾಡಿ, ತಮ್ಮನ್ನು ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಮಾಡಿರುವುದು ತಮ್ಮ ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸಿದೆ. ಇನ್ನಷ್ಟು ಸಾಧನೆ ಮಾಡಲು ಪ್ರೇರೇಪಿಸಿದೆ ಎಂದರು.

ಸಮ್ಮೇಳನಕ್ಕೆ ಮುನ್ನ ವಿವಿಧ ಜಾನಪದ ಕಲಾತಂಡಗಳ ನಡುವೆ ಸಮ್ಮೇಳನಾಧ್ಯಕ್ಷರ ಮೆರವಣಿಗೆಯನ್ನು ಗ್ರಾಮದಲ್ಲಿ ಅದ್ದೂರಿಯಾಗಿ ನಡೆಸಲಾಯಿತು.

ವಿವಿಧ ಜಾನಪದ ಕಲಾತಂಡಗಳಿಂದ ಜಾನಪದ ಗಾಯನ, ನೃತ್ಯಜರುಗಿದವು. ಡಾ. ಅಪ್ಪಗೆರೆ ತಿಮ್ಮರಾಜು ಅವರ ಗಾಯನ ಗಮನ ಸೆಳೆಯಿತು.

ಹಿರಿಯ ವೀರಗಾಸೆ ಕಲಾವಿದ ಡಾ. ಮಾಳೇನಹಳ್ಳಿ ಬಸಪ್ಪ, ಕರ್ನಾಟಕ ಜಾನಪದ ಪರಿಷತ್ತಿನ ಕಡೂರು ತಾಲೂಕು ಅಧ್ಯಕ್ಷ ಜಗದೀಶ್ವರಾಚಾರ್, ಹೋಬಳಿ ಅಧ್ಯಕ್ಷ ಶ್ರೀನಿವಾಸ್, ಕುಂಕನಾಡು ನಾಗರಾಜ್, ಗ್ರಾಮಸ್ಥರಾದ ಮಂಜಣ್ಣ, ಚಂದ್ರಣ್ಣ, ಕಾರೆಹಳ್ಳಿ ಬಸಪ್ಪ, ಚಿಕ್ಕನಲ್ಲೂರು ಜಯಣ್ಣ ಉಪಸ್ಥಿತರಿದ್ದರು.