ಬೆಂಗಳೂರು : ನ್ಯಾಯಾಲಯವನ್ನು ಬೆದರಿಸಬಹುದು ಅಂದುಕೊಂಡಿದ್ದರೆ, ನ್ಯಾಯಾಲಯ ಬೆದರುವುದಿಲ್ಲ. ಸರ್ಕಾರವನ್ನೂ ಬೆದರಿಸಲು ಸಾಧ್ಯವಿಲ್ಲ. ಈಗ ಇರೋದು ಬಿಜೆಪಿ ಸರ್ಕಾರ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರು ಹೇಳಿದರು.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಹಿಜಾಬ್ ವಿಚಾರ ಬಹಳ ಸ್ಪಷ್ಟ ಇದೆ. ಅವರ ಮೂಗಿಗೆ ನೇರವಾಗಿ ತೀರ್ಪು ಬಂದರೆ ಸಂವಿಧಾನ ಬಗ್ಗೆ ಮಾತಾಡ್ತಾರೆ. ಇಲ್ಲವಾದರೆ ಅವರ ಅಜೆಂಡಾ ಬಗ್ಗೆ ಮಾತನಾಡುತ್ತಾರೆ. ಹಿಂದೆ ಶಬಾನಾ ವಿಚಾರವಾಗಿ ತೀರ್ಪು ಬಂದಾಗ ಹೀಗೆಯೇ ಮಾಡಿದ್ದರು. ಅಂದಿನ ರಾಜೀವ್ ಗಾಂಧಿ ಸರ್ಕಾರ ಬೆದರಿಕೆಗೆ ಮಣಿದಿತ್ತು. ಜಿನ್ನಾ ಮಾನಸಿಕತೆ ಬಿಟ್ಟು ಬಿಡಿ. ಜಿನ್ನಾ ಅಜೆಂಡಾ ಈಗ ನಡೆಯೋದಿಲ್ಲ ಎಂದು ಎಚ್ಚರಿಕೆ ನೀಡಿದರು.
ಫ್ರಾನ್ಸ್, ಆಸ್ಟ್ರೇಲಿಯಾ ಬುರ್ಖಾ ಬ್ಯಾನ್ ಮಾಡಿದೆ. ಭಾರತ ಆಗಲಿ, ಕರ್ನಾಟಕ ಆಗಲಿ ಹಿಜಾಬ್, ಬುರ್ಖಾ ಬ್ಯಾನ್ ಮಾಡಿಲ್ಲ. ಶಾಲೆಗಳಲ್ಲಿ ಯಾಕೆ ಬ್ಯಾನ್ ಅಂದ್ರೆ, ಎಲ್ಲ ಮಕ್ಕಳು ಒಂದೇ ಅನ್ನೋದಕ್ಕೆ. ಡಾ. ಬಿ.ಆರ್ ಅಂಬೇಡ್ಕರ್ ಬುರ್ಖಾ ಬಗ್ಗೆ ಏನು ಹೇಳಿದ್ದಾರೆ ಓದಿ. ಬುರ್ಖಾ ಮಾನಸಿಕ ಗುಲಾಮಗಿರಿ ಅಂತ ತಿಳಿಸಿದ್ದಾರೆ. ಅವರ ಮಾತನ್ನು ಹೇಳುವವರು, ಒಮ್ಮೆ ಅಂಬೇಡ್ಕರ್ ಹೇಳಿರುವುದನ್ನು ಓದಿ ಎಂದರು.
ದಿ ಕಾಶ್ಮೀರ ಫೈಲ್ಸ್ ಅನ್ನೋದು ಸತ್ಯ ಘಟನೆ ಬಗ್ಗೆ ಮಾಡಿದ ಚಿತ್ರ. ಮತಾಂಧತೆ ಕಳೆದುಕೊಂಡು ಹತ್ಯೆ ಮಾಡಿದ ಘಟನೆಯನ್ನು ಚಿತ್ರಿಸಲಾಗಿದೆ. ಕುಶಸ್ಥಳ ಇಂದು ಪಾಕಿಸ್ತಾನಕ್ಕೆ ಸೇರಿದೆ. ಉಗ್ರ ನರಸಿಂಹನ ಭೂಮಿ ಮುಲ್ತಾನಾ ಆಗಿದೆ. ಶಾರದೆ ಜನ್ಮಸ್ಥಳ ಕಾಶ್ಮೀರ ನಮ್ಮ ಬಳಿ ಇಲ್ಲ. ಅದು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಇದೆ ಎಂದು ಸಿ.ಟಿ.ರವಿ ಹೇಳಿದರು.
ದಿ ಕಾಶ್ಮೀರ ಫೈಲ್ಸ್ ಸಿನಿಮಾಗೆ ನೀಡಿದಂತೆ ಜೇಮ್ಸ್ ಗೂ ತೆರಿಗೆ ವಿನಾಯಿತಿ ಕೊಡುವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ದಿ ಕಾಶ್ಮೀರ ಪೈಲ್ ಸಿನಿಮಾ ಸತ್ಯಾಂಶಗಳ ಮೇಲೆ ತೆಗೆದಿರುವ ಸಿನಿಮಾ. ಜೇಮ್ಸ್ ಸಂದೇಶ ಇರುವ ಸಿನಿಮಾ. ಇದಕ್ಕೂ ಸಹ ತೆರಿಗೆ ವಿನಾಯಿತಿ ಕೊಟ್ಟರೆ ಸ್ವಾಗತಾರ್ಹ. ಆದರೆ ಎರಡು ಸಿನಿಮಾಗಳನ್ನ ಹೋಲಿಕೆ ಮಾಡುವುದು ಬೇಡ ಎಂದು ಮನವಿ ಮಾಡಿದರು.










