ಬೆಂಗಳೂರು : ಕರ್ನಾಟಕ ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಣೆಯಾದ ಬೆನ್ನಲ್ಲೇ ರಾಜ್ಯ ರಾಜಕಾರಣದಲ್ಲಿ ಪಕ್ಷಾಂತರ ಪರ್ವ ಶುರುವಾಗಿದೆ. ಜೆಡಿಎಸ್ಗೆ ಐವರು ನಾಯಕರು ಗುಡ್ಬೈ ಹೇಳಿದ್ದಾರೆ.
ಕೋಲಾರದ ಶ್ರೀನಿವಾಸಗೌಡ, ಗುಬ್ಬಿ ಶ್ರೀನಿವಾಸ್, ಅರಕಲಗೂಡು ಎಟಿ ರಾಮಸ್ವಾಮಿ, ಅರಸೀಕೆರೆಯ ಶಿವಲಿಂಗೇಗೌಡ ಕಡೂರಿನ ವೈಎಸ್ ವಿ ದತ್ತಾ ಜೆಡಿಎಸ್ ಗೆ ವಿದಾಯ ಹೇಳಿದ್ದಾರೆ. ಐವರು ನಾಯಕರಿಗೆ ಕಾಂಗ್ರೆಸ್ ಟಿಕೆಟ್ ನೀಡುವ ಸಾಧ್ಯತೆಯಿದೆ.
ಎಟಿ ರಾಮಸ್ವಾಮಿ ಅವರು ವಿಧಾನಸಭೆ ಕಾರ್ಯದರ್ಶಿ ವಿಶಾಲಾಕ್ಷಿಯವರಿಗೆ ರಾಜೀನಾಮೆ ಪತ್ರ ನೀಡಿದರು. ಇದೇ ವೇಳೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ರಾಮಸ್ವಾಮಿ, ಸಂತೋಷದಿಂದ ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ಶಾಸಕನಾಗಲು ಅವಕಾಶ ಮಾಡಿಕೊಟ್ಟ ಜೆಡಿಎಸ್ ಗೆ ಧನ್ಯವಾದ. ನಾನು ವೈಯಕ್ತಿಕ ಹಿತಾಸಕ್ತಿಯಿಂದ ರಾಜಕೀಯ ಮಾಡಿಲ್ಲ. ನಾನು ಶಾಸಕನಾಗಿದ್ದಾಗ ಜನಪರವಾದ ಕೆಲಸ ಮಾಡಿದ್ದೇನೆ. ನಾನು ಸರಿ ಇದ್ರೆ ಸರಿ, ತಪ್ಪಾಗಿದ್ದರೆ ತಪ್ಪು ಎಂದು ಹೇಳಿದ್ದಾನೆ. ನಾನು ಜೆಡಿಎಸ್ ಬಿಟ್ಟೆ ಎಂದು ಎಲ್ಲೂ ಹೇಳಿಲ್ಲ. ಜೆಡಿಎಸ್ ನವರೇ ನನ್ನನ್ನು ಹೊರ ಹಾಕಿದರು. ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತಿದ್ದೇ ನನಗೆ ಮುಳುವಾಯಿತು ಎಂದು ಅಸಮಾಧಾನ ಹೊರಹಾಕಿದರು.










