ಟರ್ಕಿ, ಸಿರಿಯಾ ಭೂಕಂಪನ ; ಸಾವಿನ ಸಂಖ್ಯೆ 15 ಸಾವಿರಕ್ಕೆ ಏರಿಕೆ…

51
firstsuddi

ಅಂಕಾರ : ಭೀಕರ ಭೂಕಂಪದಿಂದಾಗಿ ಟರ್ಕಿ ಹಾಗೂ ಸಿರಿಯಾ ದೇಶಗಳಲ್ಲಿ ಇಲ್ಲಿಯವರೆಗೆ ಸಾವಿನ ಸಂಖ್ಯೆ 15 ಸಾವಿರಕ್ಕೆ ಏರಿಕೆಯಾಗಿದೆ. ಈ ಪೈಕಿ ಟರ್ಕಿಯಲ್ಲಿಯೇ 12,391 ಮಂದಿ ಸಾವನ್ನಪ್ಪಿದ್ದರೆ, ಸಿರಿಯಾದಲ್ಲಿ 2,992 ಮಂದಿ ಸಾವನ್ನಪ್ಪಿದ್ದಾರೆಂದು ತಿಳಿದುಬಂದಿದೆ.

ಭೂಕಂಪನದಿಂದಾಗಿ ನೆಲಕಚ್ಚಿರುವ ಸಹಸ್ರಾರು ಕಟ್ಟಡಗಳ ಅವಶೇಷಗಳಡಿ ಸಿಲುಕಿರುವ ಜನರನ್ನು ರಕ್ಷಣಾ ಸಿಬ್ಬಂದಿ ಹಗಲು-ರಾತ್ರಿ ಎನ್ನದೆ ರಕ್ಷಿಸಲು ಟರ್ಕಿಯಲ್ಲಿ ಅತೀವ ಪ್ರಯತ್ನ ಮುಂದುವರೆಸಿದ್ದಾರೆ. ಭೂಕಂಪದಿಂದ ಹಾನಿಗೆ ಒಳಗಾದ ಪ್ರದೇಶಗಳು ಅಪಾರವಾಗಿರುವುದರಿಂದ ಕಟ್ಟಡಗಳ ಅವಶೇಷಗಳಡಿ ಸಿಲುಕಿರುವ ಜನರು ನೆರವಿಗಾಗಿ ಮೊರೆ ಇಡುತ್ತಿದ್ದಾರೆ. ಅವರ ಆಕ್ರಂದನ ಮುಗಿಲು ಮುಟ್ಟಿದೆ.

ಟರ್ಕಿಯಲ್ಲಿ 8.5 ಕೋಟಿ ಜನಸಂಖ್ಯೆ ಇದ್ದು, ಆ ಪೈಕಿ 1.3 ಕೋಟಿ ಜನರು ಭೂಕಂಪನದಿಂದ ಬಾಧಿತರಾಗಿದ್ದಾರೆ. 10 ಪ್ರಾಂತ್ಯಗಳಲ್ಲಿ ಟರ್ಕಿ ಸರ್ಕಾರ ತುರ್ತು ಪರಿಸ್ಥಿತಿ ಘೋಷಣೆ ಮಾಡಿದೆ. ಸದ್ಯ 3.8 ಲಕ್ಷ ಜನರು ಮಾತ್ರ ಸರ್ಕಾರಿ ನಿರಾಶ್ರಿತ ಕೇಂದ್ರ ಅಥವಾ ಹೋಟೆಲ್ ಗಳಲ್ಲಿ ಆಶ್ರಯ ಪಡೆದಿದ್ದಾರೆಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಸುಮಾರು 3,000 ಭಾರತೀಯರು ಟರ್ಕಿಯಲ್ಲಿ ವಾಸವಿದ್ದು, ಈ ಪೈಕಿ ಬೆಂಗಳೂರಿನ ಒಬ್ಬ ವ್ಯಕ್ತಿ ನಾಪತ್ತೆಯಾಗಿರುವ ವಿಚಾರ ಬೆಳಕಿಗೆ ಬಂದಿದೆ. ಕಳೆದ ಎರಡು ದಿನಗಳಿಂದ ಇವರು ಯಾರ ಸಂಪರ್ಕಕ್ಕೂ ಸಿಕ್ಕಿಲ್ಲ ಎನ್ನಲಾಗಿದೆ. ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ನಿನ್ನೆ ಇದನ್ನು ಖಚಿತಪಡಿಸಿದೆ. ಆದರೆ, ನಾಪತ್ತೆಯಾದ ಬೆಂಗಳೂರಿಗನ ಹೆಸರನ್ನು ಬಹಿರಂಗಪಡಿಸಲಾಗಿಲ್ಲ.

ಈ ನಡುವೆ ಟರ್ಕಿಯಲ್ಲಿ ಸಿಲುಕಿರುವ ಕನ್ನಡಿಗರ ರಕ್ಷಣೆಗೆ ಕರ್ನಾಟಕ ಸರ್ಕಾರ ಮುಂದಾಗಿದೆ. ಟರ್ಕಿ, ಸಿರಿಯಾ ಅವಘಡದಲ್ಲಿ ಸಿಲುಕಿದ ಕನ್ನಡಿಗರ ರಕ್ಷಣೆ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದಿಂದ ನೋಡೆಲ್ ಅಧಿಕಾರಿಗಳನ್ನ ನೇಮಕ ಮಾಡಲಾಗಿದೆ. ಟರ್ಕಿ, ಸಿರಿಯಾ ರಾಯಭಾರ ಕಚೇರಿಗಳೊಂದಿಗೆ ಸಂಪರ್ಕಿಸಿ ಕನ್ನಡಿಗರ ಮಾಹಿತಿ ಪಡೆಯಲು ಸರ್ಕಾರದಿಂದ ಸೂಚನೆ ನೀಡಿದೆ.