ಕನ್ನಡ ಚಿತ್ರರಂಗದ ಖ್ಯಾತ ನಟ ಡಾಲಿ ಧನಂಜಯ್ ಅವರಿಗೆ ಇಂದು ಜನ್ಮದಿನದ ಸಂಭ್ರಮ. ಅವರ ಅಭಿಮಾನಿಗಳು ಬಹಳ ಅದ್ದೂರಿಯಾಗಿ ಬರ್ತ್ಡೇ ಸೆಲೆಬ್ರೇಟ್ ಮಾಡುತ್ತಿದ್ದಾರೆ. ಈ ವರ್ಷ ಧನಂಜಯ್ ಅವರಿಗೆ ಹುಟ್ಟುಹಬ್ಬ ವಿಶೇಷವಾಗಿದೆ. ಏಕೆಂದರೆ, ಕಳೆದ ಕೆಲವು ವರ್ಷಗಳಿಂದ ಅವರಿಗೆ ಜನ್ಮದಿನವನ್ನು ಗ್ರ್ಯಾಂಡ್ ಆಗಿ ಸೆಲೆಬ್ರೇಟ್ ಮಾಡಲು ಸಾಧ್ಯವಾಗಿರಲಿಲ್ಲ. ಹಾಗಾಗಿ ಈ ವರ್ಷ ಅಭಿಮಾನಿಗಳ ಜೊತೆ ಸೇರಿ ಅವರು ಸಂಭ್ರಮದಿಂದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಈ ಸಂಭ್ರಮದಲ್ಲಿ ಭಾಗಿಯಾದ ಎಲ್ಲ ಅಭಿಮಾನಿಗಳಿಗೆ ವಿಶೇಷವಾಗಿ ಊಟದ ವ್ಯವಸ್ಥೆ ಮಾಡಲಾಗಿದೆ.
ಬೆಂಗಳೂರಿನ ನಂದಿ ಲಿಂಕ್ಸ್ ಮೈದಾನದಲ್ಲಿ ಇಂದು ನಟ ಡಾಲಿ ಧನಂಜಯ್ ಫ್ಯಾನ್ಸ್ ಜೊತೆ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಅಭಿಮಾನಿಗಳಿಗಾಗಿಯೇ ನಿನ್ನೆ ಮಧ್ಯರಾತ್ರಿಯಿಂದಲೇ ಸಮಯವನ್ನು ಮೀಸಲಿಟ್ಟಿದ್ದಾರೆ. ತಮ್ಮ ನೆಚ್ಚಿನ ನಟನ ಹುಟ್ಟು ಹಬ್ಬವನ್ನು ಆಚರಿಸಲು ಅಭಿಮಾನಿಗಳು ‘ಡಾಲಿ ಉತ್ಸವ’ ಹೆಸರಿನಲ್ಲಿ ಕಾರ್ಯಕ್ರಮವನ್ನೇ ಆಯೋಜನೆ ಮಾಡಿದ್ದಾರೆ.
ಧನಂಜಯ್ ಅವರಿಗೆ ಶುಭಕೋರಲು ಬಂದ ಅಭಿಮಾನಿಗಳಿಗೆ ಉತ್ತರ ಕರ್ನಾಟಕ ಮತ್ತು ದಕ್ಷಿಣ ಭಾರತದ ಶೈಲಿಯಲ್ಲಿ ಭೋಜನದ ವ್ಯವಸ್ಥೆ ಮಾಡಲಾಗಿದೆ. ರಾಯಚೂರಿನ ಅಭಿಮಾನಿಗಳು ಉತ್ತರ ಕರ್ನಾಟಕದ ಊಟ ವ್ಯವಸ್ಥೆ ಮಾಡಿದ್ದಾರೆ. ಸಿಂಧನೂರಿನಿಂದ ಖಡಕ್ ರೊಟ್ಟಿ ತರಲಾಗಿದೆ. ಎಣ್ಣೆ ಬದನೆಕಾಯಿ, ಪುಂಡೆ ಪಲ್ಯೆ, ಬೂಂದಿ, ಶೇಂಗ ಹಿಂಡಿ, ಮಿರ್ಚಿ ಸೇರಿದಂತೆ ಅನೇಕ ಬಗೆಯ ಖಾದ್ಯಗಳನ್ನು ಬಡಿಸಲಾಗುತ್ತಿದೆ. ಸುಮಾರು ಎರಡು ಸಾವಿರ ಅಭಿಮಾನಿಗಳಿಗೆ ಊಟದ ವ್ಯವಸ್ಥೆ ಮಾಡಲಾಗಿದೆ. ಡಾಲಿ ಅಭಿಮಾನಿಯಾದ ಶಿವರಾಜ್ ಪಾಟೀಲ್ ಗುಂಜಳ್ಳಿ ಉತ್ತರ ಕರ್ನಾಟಕದ ಊಟದ ವ್ಯವಸ್ಥೆ ಮಾಡಿದ್ದು ವಿಶೇಷ.
ಈ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಧನಂಜಯ್, ‘ನಾನು ಹುಟ್ಟುಹಬ್ಬ ಸೆಲೆಬ್ರೇಷನ್ ಮಾಡ್ಕೊಂಡು ತುಂಬಾ ದಿನಗಳು ಆಗಿದೆ. ಕಾರಣಾಂತರಗಳಿಂದ 3-4 ವರ್ಷಗಳಿಂದ ಆಚರಿಸಿಕೊಂಡಿರಲಿಲ್ಲ. ಈ ವರ್ಷ ಅಭಿಮಾನಿಗಳ ಜೊತೆ ಆಚರಿಸಿಕೊಳ್ಳುತ್ತಿರುವುದಕ್ಕೆ ಖುಷಿಯಾಗುತ್ತಿದೆ. ಉತ್ತರಕಾಂಡ ಸಿನಿಮಾದ ಗಬ್ರು ಸತ್ಯ, ಅಣ್ಣಾ ಫ್ರಮ್ ಮೆಕ್ಸಿಕೋ 2, ಪ್ರಾಜೆಕ್ಟ್ ಅನೌನ್ಸ್ ಮಾಡಿದ್ದೀವಿ. ನನ್ನನ್ನು ನೋಡಿ ಹಲವರು ವಿಶ್ ಮಾಡಿದ್ದರು, ಜನರು ಕೂಡ ನೀನು ಚೆನ್ನಾಗಿ ಬೆಳೆಯಬೇಕು ಅಂತ ಹಾರೈಸುತ್ತಿದ್ದಾರೆ ಅದಕ್ಕಿಂತ ದೊಡ್ಡ ಸಂಪಾದನೆ ಯಾವುದೂ ಇಲ್ಲ . ಅದನ್ನು ಕಾಪಾಡಿಕೊಳ್ಳುವ ಕೆಲಸಗಳನ್ನು ಮಾಡುತ್ತೀನಿ. ಜನರ ಪ್ರೀತಿಗೆ ನಾನ್ಯಾವತ್ತೂ ಬೆಲೆ ಕಟ್ಟೋದಕ್ಕೆ ಆಗಲ್ಲ. ನನ್ನ ಮುಂದಿನ ಸಿನಿಮಾ ಅಣ್ಣಾ ಫ್ರಮ್ ಮೆಕ್ಸಿಕೋ ಬಹಳ ಡಿಫರೆಂಟ್ ಆಗಿದೆ. ಅಭಿಮಾನಿಗಳಿಗೆ ತುಂಬಾ ಇಷ್ಟವಾಗುವ ಸಿನಿಮಾ ಮತ್ತು ಪಾತ್ರ ಕೂಡ ಇದೆ.’ ಎಂದು ಮಾತನಾಡಿದ್ದಾರೆ.










