ಡಾ.ರಾಜ್‍ಕುಮಾರ್ ಅವರ 91ನೇ ಜನ್ಮದಿನ-ಅಭಿಮಾನಿಗಳಲ್ಲಿ ಮನೆಯಲ್ಲಿ ಹುಟ್ಟುಹಬ್ಬ ಆಚರಿಸುವಂತೆ ಶಿವರಾಜ್ ಕುಮಾರ್ ಮನವಿ…

128
firstsuddi

ಬೆಂಗಳೂರು : ಇಂದು ವರನಟ ಡಾ. ರಾಜ್ ಕುಮಾರ್ ಅವರ 91ನೇ ಹುಟ್ಟುಹಬ್ಬದ ದಿನವಾಗಿದ್ದು, ದೇಶದಲ್ಲಿ ಮಹಾಮಾರಿ ಕೊರೊನಾ ವೈರಸ್ ಭೀತಿ ಇರುವುದರಿಂದ ಈ ಬಾರಿ ಯಾವುದೇ ಹುಟ್ಟುಹಬ್ಬದ ಆಚರಣೆ ಮಾಡದೆ ಕೇವಲ ಕುಟುಂಬಸ್ಥರು ಸೇರಿ ಸರಳವಾಗಿ ಪೂಜೆ ಸಲ್ಲಿಸಿದ್ದಾರೆ. ಅಲ್ಲದೇ ಅಭಿಮಾನಿಗಳೆಲ್ಲರು ತಮ್ಮ ಮನೆಯಲ್ಲೇ ಹುಟ್ಟುಹಬ್ಬವನ್ನು ಆಚರಣೆ ಮಾಡಿ ಎಂದು ನಟ ಶಿವರಾಜ್‍ಕುಮಾರ್ ಅವರು ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು, “ಪ್ರೀತಿಯ ಅಪ್ಪಾಜಿಯ ಹುಟ್ಟುಹಬ್ಬಕ್ಕೆ ನಮ್ಮ ಅಭಿಮಾನಿಗಳಿಂದ ವಿಶೇಷ ಕಾಮನ್ ಡಿಪಿ. ಅಪ್ಪಾಜಿಯ ಹುಟ್ಟುಹಬ್ಬವನ್ನು ಈ ಬಾರಿ ನಿಮ್ಮ ನಿಮ್ಮ ಮನೆಯಲ್ಲೆ ಆಚರಿಸಿ ಮನೆಯವರ ಜೊತೆಯಲ್ಲೆ ಆಚರಿಸಿ” ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಅಲ್ಲದೇ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಸೇರಿದಂತೆ ಹಲವು ಗಣ್ಯರು ರಾಜ್‍ಕುಮಾರ್ ಅವರನ್ನು ಸ್ಮರಿಸಿಕೊಂಡಿದ್ದಾರೆ. ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಟ್ವೀಟ್ ಮಾಡಿ, “ನಟ ಸಾರ್ವಭೌಮ – ಕರ್ನಾಟಕ ರತ್ನ ಡಾ. ರಾಜಕುಮಾರರ ಜನ್ಮದಿನದಂದು ಕರ್ನಾಟಕಕ್ಕೆ ಅವರು ನೀಡಿದ ಕೊಡುಗೆಗಳನ್ನು ಸ್ಮರಿಸೋಣ. ತಾಯಿ ಭುವನೇಶ್ವರಿಯ ಸೇವೆಗೆ ಕರೆ ಬಂದಾಗಲೆಲ್ಲ ಎದ್ದು ಬಂದ ಮಹಾನುಭಾವ ರಾಜಣ್ಣನವರು. ಮೂರು ತಲೆಮಾರಿನ ಕನ್ನಡಿಗರಿಗೆ ಮೌಲ್ಯ ತುಂಬಿದ ಮನರಂಜನೆ ನೀಡಿದ ಅವರನ್ನು ಆದರದಿಂದ ನೆನೆಯೋಣ” ಎಂದು ಸ್ಮರಿಸಿಕೊಂಡಿದ್ದಾರೆ.
ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು, ‘ಅಭಿಮಾನಿಗಳೇ ದೇವರು’ ಎಂದು ಬಣ್ಣಿಸಿದ ವರನಟ ಡಾ. ರಾಜಕುಮಾರ್ ಅವರ ಜನುಮ ದಿನ ಇಂದು. ಅವರ ನೆನಪು ಎಂದೆಂದಿಗೂ ಅಮರ. ನಾಡುನುಡಿಯ ಬಗ್ಗೆ ಅವರ ನಿಲುವು ಅನುಕರಣೀಯ. ಕನ್ನಡದ ಅಸ್ಮಿತೆ ಮತ್ತು ಆದರ್ಶವಾಗಿದ್ದ ರಾಜ್ ಅವರ ಸದಭಿರುಚಿಯ ಸಿನಿಮಾಗಳನ್ನು ನೋಡಿ ನಾನು, ನನ್ನಂತಹ ಲಕ್ಷಾಂತರ ಮಂದಿ ಬದುಕಿನಲ್ಲಿ ಸ್ಫೂರ್ತಿ ಕಂಡವರು. ನಾಡಿನ ಸಾಂಸ್ಕೃತಿಕ ರಾಯಭಾರಿಯಾಗಿದ್ದ ಇಂತಹ ಮಹಾ ಚೇತನಕ್ಕೆ ನನ್ನ ಪ್ರಣಾಮಗಳು ಟ್ವೀಟ್ ಮಾಡಿದ್ದಾರೆ.