ನ್ಯೂಯಾರ್ಕ್: ಓಹಿಯೋದ 23 ವರ್ಷದ ಯುವತಿಯೊಬ್ಬಳು ತನ್ನ ತಾಯಿಯ ಕುತ್ತಿಗೆಗೆ 30 ಬಾರಿ ಚಾಕುವಿನಿಂದ ಇರಿದು, ಕಬ್ಬಿಣದ ಬಾಣಲೆಯಿಂದ ಹೊಡೆದು ಕೊಲೆ ಮಾಡಿರುವ ಆಘಾತಕಾರಿ ಘಟನೆಯೊಂದು ಅಮೆರಿಕಾದಲ್ಲಿ ನಡೆದಿದೆ.
ಮೃತಳನ್ನು ಬ್ರೆಂಡಾ ಪೋವೆಲ್(50) ಎಂದು ಗುರುತಿಸಲಾಗಿದೆ. ಸಿಡ್ನಿ ಪೋವೆಲ್, ತಾಯಿಯನ್ನು ಕೊಂದ ಪಾಪಿ ಮಗಳು. ಸಿಡ್ನಿ ಪೋವೆಲ್ ನ್ನು ಕಾಲೇಜಿನಿಂದ ಹೊರಹಾಕಲಾಗಿತ್ತು. ಆ ವಿಚಾರ ಹೇಗೋ ಬ್ರೆಂಡಾಗೆ ತಿಳಿದುಬಿಟ್ಟಿತ್ತು, ಈ ಕುರಿತು ತಾಯಿ ಪ್ರಶ್ನೆ ಮಾಡಿದಾಗ ಕೋಪಗೊಂಡ ಮಗಳು ತಾಯಿಯನ್ನು ಹತ್ಯೆ ಮಾಡಿದ್ದಾಳೆ.
2020ರಲ್ಲಿ ಈ ಘಟನೆ ನಡೆದಿತ್ತು, ಇದೀಗ ಸೆಪ್ಟೆಂಬರ್ 28ರಂದು ಸಿಡ್ನಿ ಪೋವೆಲ್ ಶಿಕ್ಷೆಯನ್ನು ಕೋರ್ಟ್ ಪ್ರಕಟಿಸಲಿದೆ. ಮೌಂಟ್ ಯೂನಿಯನ್ ಯೂನಿವರ್ಸಿಟಿಯ ಹಳೆಯ ವಿದ್ಯಾರ್ಥಿನಿ ಪೋವೆಲ್ ಅನ್ನು ತಪ್ಪಿತಸ್ಥೆ ಎಂದು ಕೋರ್ಟ್ ಘೋಷಿಸಿದೆ.
2020ರ ಮಾರ್ಚ್ 3 ರಂದು ರಕ್ತಸಿಕ್ತ ಸ್ಥಿತಿಯಲ್ಲಿ ಬ್ರೆಂಡಾ ಪತ್ತೆಯಾಗಿದ್ದರು. ತಕ್ಷಣವೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದರು. ಪೋವೆಲ್ ಸ್ಕಿಜೋಫ್ರೇನಿಯಾದಿಂದ ಬಳಲುತ್ತಿದ್ದರು, ಆಕೆ ತನ್ನ ತಾಯಿಯನ್ನು ಕೊಲೆ ಮಾಡಿದಾಗ, ಮಾನಸಿಕ ಸ್ಥಿತಿ ಸರಿ ಇರಲಿಲ್ಲ ಎಂದು ವಕೀಲರು ವಾದಿಸಿದ್ದಾರೆ. ಆದರೆ ವಕೀಲರ ವಾದ ಸರಿ ಇಲ್ಲ. ಪೋವೆಲ್ ತನ್ನ ತಾಯಿಗೆ ಒಂದು ಬಾರಿಯಲ್ಲ 30 ಬಾರಿ ಇರಿದಿದ್ದಾಳೆ. ಆಕೆಯ ಉದ್ದೇಶ ತಾಯಿಯನ್ನು ಕೊಲ್ಲುವುದೇ ಆಗಿತ್ತೆಂದು ನ್ಯಾಯಾಲಯ ತಿಳಿಸಿದ್ದು, ಪೋವೆಲ್ ಶಿಕ್ಷೆಯನ್ನು ಸೆಪ್ಟೆಂಬರ್ 28ರಂದು ನಿಗದಿಪಡಿಸಿದೆ.










