ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಬಂದಿದ್ದ ಮತ್ತೊಂದು ಚೀತಾ ಸಾವು…

65
firstsuddi

ಕುನೋ : ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಬಂದಿದ್ದ ಮತ್ತೊಂದು ಚೀತಾ ಸಾವನ್ನಪ್ಪಿದೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಮಹತ್ವದ ಚೀತಾ ಯೋಜನೆಯಲ್ಲಿ ದಕ್ಷಿಣ ಆಫ್ರಿಕಾದಿಂದ ಕುನೋ ನ್ಯಾಷನಲ್ ಪಾರ್ಕ್ ಗೆ ತರಲಾಗಿದ್ದ ಉದಯ್ ಎಂಬ ಹೆಸರಿನ ಗಂಡು ಚೀತಾ ಅನಾರೋಗ್ಯದಿಂದ ನಿನ್ನೆ ಸಂಜೆ ಮೃತಪಟ್ಟಿದೆ. ಉದಯ್ ಚೀತಾ ಸಾವಿಗೆ ಮರಣೋತ್ತರ ಪರೀಕ್ಷೆ ವರದಿ ಬಳಿಕ ಕಾರಣ ತಿಳಿಯಲಿದೆ.

ನಿನ್ನೆ ಬೆಳಗ್ಗೆಯಿಂದ ಅಸ್ವಸ್ಥಗೊಂಡಿದ್ದ ಚೀತಾವನ್ನು ವನ್ಯಜೀವಿ ವೈದ್ಯರು ಚಿಕಿತ್ಸೆ ಮತ್ತು ಮೇಲ್ವಿಚಾರಣೆಗಾಗಿ ಪ್ರತ್ಯೇಕ ವಾರ್ಡ್ ನಲ್ಲಿ ಇರಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ಸಂಜೆ 4 ಗಂಟೆ ಸಮಯದಲ್ಲಿ ಚೀತಾ ಮೃತಪಟ್ಟಿದೆ. ಉದಯ್ ಚೀತಾ ಸಾವಿಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ ಎಂದು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಜೆ.ಎಸ್. ಚೌಹಾಣ್ ಮಾಹಿತಿ ನೀಡಿದ್ದಾರೆ.

ಇದಕ್ಕೂ ಮುನ್ನ ನಮೀಬಿಯಾದಿಂದ ತರಲಾಗಿದ್ದ ಎಂಟು ಚೀತಾಗಳ ಪೈಕಿ ಸಾಶಾ ಎಂಬ ಹೆಣ್ಣು ಚೀತಾ ಮಾರ್ಚ್‌ 27ರಂದು ಮೂತ್ರಪಿಂಡ ವೈಫಲ್ಯದಿಂದ ಮೃತಪಟ್ಟಿತ್ತು. ಸಾಶಾ ಸಾವಿನ ಬೆನ್ನಲ್ಲೇ ಮತ್ತೊಂದು ಹೆಣ್ಣು ಚೀತಾ ಸಿಯಾಯಾ ನಾಲ್ಕು ಮರಿಗಳಿಗೆ ಜನ್ಮ ನೀಡಿತ್ತು.

ನಮೀಬಿಯಾದಿಂದ ಕಳೆದ ವರ್ಷದ ಸೆಪ್ಟೆಂಬರ್ ನಲ್ಲಿ ಎಂಟು ಚೀತಾಗಳನ್ನು ತರಿಸಲಾಗಿತ್ತು. ಹಾಗೆಯೇ ಈ ವರ್ಷದ ಫೆಬ್ರವರಿಯಲ್ಲಿ ದಕ್ಷಿಣ ಆಫ್ರಿಕಾದಿಂದ 12 ಚೀತಾಗಳು ಭಾರತಕ್ಕೆ ಬಂದಿದ್ದವು. ಒಟ್ಟು 20 ಚೀತಾಗಳ ಪೈಕಿ 18 ಚೀತಾಗಳು ಉಳಿದಂತಾಗಿದೆ.