ದಲಿತರಲ್ಲಿ ಸ್ವಾಭಿಮಾನದ ಕಿಚ್ಚು ಹಚ್ಚಿದವರು ಕೃಷ್ಣಪ್ಪನವರು : ಜಾಕೀರ್ ಹುಸೇನ್.

74
firstsuddi

ಚಿಕ್ಕಮಗಳೂರು : ದಲಿತರಲ್ಲಿ ಸ್ವಾಭಿಮಾನದ ಕಿಚ್ಚನ್ನು ಹಚ್ಚಿದವರು ಮಹಾತ್ಮ ಪ್ರೊ|| ಬಿ.ಕೃಷ್ಣಪ್ಪನವರು ಎಂದು ಬಿಎಸ್‍ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಜಾಕೀರ್ ಹುಸೇನ್ ಹೇಳಿದರು.

ಜಿಲ್ಲಾ ಸಹೋದರತ್ವ ಸಮಿತಿ ನಗರದ ಅಂಬೇಡ್ಕರ್ ಭವನದಲ್ಲಿ ಇಂದು ಏರ್ಪಡಿಸಿದ್ದ ಮಹಾತ್ಮ ಪ್ರೊ|| ಬಿ.ಕೃಷ್ಣಪ್ಪನವರ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

70ರ ದಶಕದಲ್ಲಿ ರಾಜ್ಯದಲ್ಲಿ ದಲಿತರು, ಕೆಳವರ್ಗದವರು ಮತ್ತು ಶೋಷಿತರ ಮೇಲಿನ ದಬ್ಬಾಳಿಕೆ, ದೌರ್ಜನ್ಯ, ಶೋಷಣೆ ಮಿತಿಮೀರಿತ್ತು, ಮೇಲ್ವರ್ಗದ ಜನ ಅವರನ್ನು ಪ್ರಾಣಿಗಳಿಗಿಂತಲೂ ತುಚ್ಚವಾಗಿ ಕಾಣುತ್ತಿದ್ದರು. ದಲಿತರ ಮೇಲಿನ ದೌರ್ಜನ್ಯವನ್ನು ತಡೆಗಟ್ಟುವ ನಿಟ್ಟಿನಲ್ಲಿ ಪ್ರೊ|| ಬಿ.ಕೃಷ್ಣಪ್ಪನವರು ರಾಜ್ಯದಲ್ಲಿ ದಲಿತ ಸಂಘರ್ಷ ಸಮಿತಿಯನ್ನು ಹುಟ್ಟುಹಾಕಿದರು, ಆ ಮೂಲಕ ದಲಿತರು ಮತ್ತು ಶೋಷಿತರಲ್ಲಿ ಹೋರಾಟದ ಹಾಗೂ ಸ್ವಾಭಿಮಾನದ ಕಿಚ್ಚನ್ನು ಹಚ್ಚಿದರು, ಕೆಳವರ್ಗದವರಲ್ಲಿ ಜಾಗೃತಿ ಮೂಡಿಸಿದರು ಎಂದು ತಿಳಿಸಿದರು.

ಮಹಾತ್ಮ ಪ್ರೊ|| ಬಿ.ಕೃಷ್ಣಪ್ಪನವರು ಇಲ್ಲದಿದ್ದಲ್ಲಿ ರಾಜ್ಯದ ದಲಿತ ಸಮುದಾಯಕ್ಕೆ ಅಂಬೇಡ್ಕರ್ ಅವರ ವಿಚಾರಧಾರೆಗಳೇ ತಿಳಿಯುತ್ತಿರಲಿಲ್ಲ ಹಾಗಾಗಿ ಕೃಷ್ಣಪ್ಪನವರನ್ನು ದಲಿತ ವರ್ಗ ಮರೆಯಲು ಸಾಧ್ಯವಿಲ್ಲ ಎಂದರು.

ಜಿಲ್ಲಾ ಸಹೋದರತ್ವ ಸಮಿತಿಯ ಕಾರ್ಯಚಟುವಟಿಕೆಗಳನ್ನು ಶ್ಲಾಘಿಸಿದ ಅವರು ಸಮಿತಿ ಇನ್ನೂ ಹೆಚ್ಚಿನ ಸಮಾಜ ಸೇವೆಗೆ ಮುಂದಾಗಬೇಕು ಎಂದು ಸಲಹೆ ಮಾಡಿದರು.

ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಮಾತನಾಡಿದ ಹಂಪಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಪ್ರೊ|| ಬಿ.ಎಂ.ಪುಟ್ಟಯ್ಯ ಓದುವ ಹಠ ಮತ್ತು ಛಲ ನಮ್ಮಲಿದ್ದರೆ ಎಲ್ಲಾ ಕೊರತೆಗಳ ನಡುವೆಯೂ ನಾವು ವಿದ್ಯಾವಂತರಾಗಬಹುದು ಎಂದರು.

ಕ್ರಾಂತಿ ಗೀತೆಗಳನ್ನು ಹಾಡುವ ಮೂಲಕ ರಂಜಿಸಿದ ಪುಟ್ಟಯ್ಯ ಹೆಚ್ಚು ಅಂಕ ಗಳಿಸಲು ಒಳ್ಳೆಯ ಶಾಲೆ, ಒಳ್ಳೆಯ ಶಿಕ್ಷಕರು ಅಥವಾ ಮನೆ ಪಾಠದ ಅಗತ್ಯವಿಲ್ಲ, ಹೆಚ್ಚು ಅಂಕ ಗಳಿಸಲು ಓದಿನ ಮೇಲೆ ಪ್ರೀತಿಯಿದ್ದರೆ ಸಾಕು ಎಂದು ಕಿವಿಮಾತು ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಸಹೋದರತ್ವ ಸಮಿತಿಯ ಅಧ್ಯಕ್ಷೆ ಕೆ.ಬಿ.ಸುಧಾ ಪ್ರೊ|| ಬಿ.ಕೃಷ್ಣಪ್ಪನವರ ಬದುಕು, ಸಂದೇಶ ಮತ್ತು ಅವರ ವಿಚಾರಧಾರೆಗಳನ್ನು ವಿವರಿಸಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಬಿಎಸ್‍ಪಿ ಜಿಲ್ಲಾಧ್ಯಕ್ಷ ಕೆ.ಟಿ.ರಾಧಾಕೃಷ್ಣ ಅಂಬೇಡ್ಕರ್ ಅವರ ಸಾಮಾಜಿಕ, ರಾಜಕೀಯ ಹೋರಾಟದ ರಥವನ್ನು ಸಮರ್ಥವಾಗಿ ಎಳೆದು ತಂದವರು ಮಹಾತ್ಮ ಪ್ರೊ|| ಬಿ.ಕೃಷ್ಣಪ್ಪನವರು ಎಂದು ಹೇಳಿದರು.

ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು. ಸಹೋದರತ್ವ ಸಮಿತಿಯ ಜಿಲ್ಲಾ ಖಜಾಂಚಿ ಅಸ್ಮಾ ಪರ್ವಿನ್, ಬಿಎಸ್‍ಪಿ ತಾಲ್ಲೂಕು ಅಧ್ಯಕ್ಷ ಹರೀಶ್ ಮಿತ್ರ, ಕಛೇರಿ ಕಾರ್ಯದರ್ಶಿ ಕೆ.ಆರ್.ಗಂಗಾಧರ್, ಜಿಲ್ಲಾ ಕಾರ್ಯದರ್ಶಿ ಟಿ.ಕೆ.ಮಂಜುನಾಥ್, ಪಕ್ಷದ ಮುಖಂಡರಾದ ಕಲಾವತಿ, ಕುಸುಮ, ಕೆ.ಎಸ್.ಮಂಜುಳಾ, ಪಿ.ವಿ.ತಂಬನ್, ವಿನೂತ್, ವಸಂತ, ವಿಜಯಕುಮಾರ್ ಉಪಸ್ಥಿತರಿದ್ದರು.