ಉಡುಪಿ : ದಸರಾ ಮುಗಿದ ತಕ್ಷಣವೇ ಶಾಲೆಗಳು ಆರಂಭ ಮಾಡಲಾಗುವುದು ಎಂದು ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಹೇಳಿದರು.
ಇಂದು ಉಡುಪಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಭಗವಂತನ ಅನುಗ್ರಹದಿಂದ ರಾಜ್ಯದಲ್ಲಿ ಪಾಸಿಟಿವಿಟಿ ರೇಟ್ ಕಡಿಮೆಯಾಗುತ್ತಿದೆ. ಹಲವಾರು ಜಿಲ್ಲೆಯಲ್ಲಿ ಪಾಸಿಟಿವಿಟಿ ಝೀರೋ ಇದ್ದು, ಶಾಲೆ ಆರಂಭಿಸಬಹುದು ಎಂದು ತಜ್ಞರು ಅಭಿಪ್ರಾಯ ಕೊಟ್ಟಿದ್ದಾರೆ. ಈ ಕುರಿತು ಮುಖ್ಯಮಂತ್ರಿಗಳು ಬೆಂಗಳೂರಿನಲ್ಲಿ ಟಾಸ್ಕ್ ಫೋರ್ಸ್ ಸಭೆ ಕರೆಯುತ್ತಾರೆ. ಸಿಎಂ ಬೊಮ್ಮಾಯಿ ಶೀಘ್ರ ಶಾಲೆ ಆರಂಭಿಸಲು ಆಸಕ್ತಿ ತೋರಿದ್ದಾರೆ ಎಂದರು.
ತಾಂತ್ರಿಕ ಸಲಹಾ ಸಮಿತಿ ಒಪ್ಪಿಗೆ ಮೇರೆಗೆ ಶೀಘ್ರ ಶಾಲೆ ಆರಂಭಿಸುತ್ತೇವೆ, ಎಲ್ಲರಿಗೂ ಶಾಲೆ ಕಡ್ಡಾಯ ಮಾಡಿಲ್ಲ ಮುಂದೆಯೂ ಕಡ್ಡಾಯ ಮಾಡಲ್ಲ. ಆನ್ ಲೈನ್, ಆಫ್ ಲೈನ್ ಎರಡು ಮಾದರಿಯಲ್ಲಿ ತರಗತಿಗಳು ನಡೆಯಲಿದೆ. ಈಗ ಆರಂಭವಾಗಿರುವ ಶಾಲೆಗಳ ಹಾಜರಾತಿ ತೃಪ್ತಿಕರವಾಗಿದೆ. ಆನ್ ಲೈನ್ ತರಗತಿಯಿಂದ ಕೆಳ ಗ್ರಾಮೀಣ ಮಕ್ಕಳಿಗೆ ತೊಂದರೆ ಆಗಿದೆ. ಗ್ರಾಮೀಣ ಭಾಗದಲ್ಲಿ ಹೈಸ್ಕೂಲ್ ಮಕ್ಕಳ ಹಾಜರಾತಿ ಶೇ. 90ರಷ್ಟು ಇದೆ. ದಸರಾ ಮುಗಿದ ತಕ್ಷಣ ಬಿಸಿಯೂಟ ಆರಂಭವಾಗಲಿದ್ದು, ಆಯಾ ಜಿಲ್ಲೆಯ ಅಧಿಕಾರಿಗಳು ಎಲ್ಲಾ ವ್ಯವಸ್ಥೆಗಳನ್ನು ಮಾಡಿದ್ದಾರೆ ಎಂದರು.










