ನವದೆಹಲಿ : ಏರ್ ಇಂಡಿಯಾವನ್ನ ಪುನಃ ತನ್ನ ಸ್ವಾಧೀನಕ್ಕೆ ಪಡೆದುಕೊಳ್ಳುವಲ್ಲಿ ಟಾಟಾ ಸನ್ಸ್ ಯಶಸ್ವಿಯಾಗಿದ್ದು, ಈ ಕುರಿತು ಅಧಿಕೃತವಾಗಿ ಇಂದು ಕೇಂದ್ರ ಸರ್ಕಾರದಿಂದ ಘೋಷಣೆ ಹೊರಬಿದ್ದಿದೆ.
ಈ ಬಗ್ಗೆ ಖುದ್ದಾಗಿ ಮಾಹಿತಿ ನೀಡಿರುವ ಡಿಐಪಿಎಎಂ ಕಾರ್ಯದರ್ಶಿ ತುಹಿನ್ ಕಾಂತ್ ಪಾಂಡೆ, ಟಾಟಾ ಸನ್ಸ್ 18,000 ಕೋಟಿ ರೂಪಾಯಿಗೆ ಹರಾಜು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದು, ಡಿಸೆಂಬರ್2021ರ ಅಂತ್ಯದ ವೇಳಗೆ ವಹಿವಾಟು ಮುಕ್ತಾಯಗೊಳ್ಳಲಿದೆ ಎಂದಿದ್ದಾರೆ.
ಏರ್ ಇಂಡಿಯಾ ಕಂಪನಿಯ ಮೇಲಿರುವ ಒಟ್ಟು ಸಾಲದ ಹೊರೆ 61,562 ಕೋಟಿ. ಟಾಟಾ ಸನ್ಸ್ ಕಂಪನಿಯು ಏರ್ ಇಂಡಿಯಾ ಖರೀದಿಗಾಗಿ 18,000 ಕೋಟಿಗೆ ಟೆಂಡರ್ ಬಿಡ್ ಸಲ್ಲಿಸಿತ್ತು. ಬಿಡ್ ವಿಜೇತ ಕಂಪನಿಯು 15,300 ಕೋಟಿ ಸಾಲದ ಭಾರವನ್ನು ಹೊರಬೇಕಾಗುತ್ತದೆ. ಉಳಿದ ಸಾಲವನ್ನು ಭಾರತ ಸರ್ಕಾರ ಮನ್ನಾ ಮಾಡಲಿದೆ ಎಂದು ಅವರು ತಿಳಿಸಿದರು.
ಕಳೆದ ಕೆಲ ವರ್ಷಗಳಿಂದ ಏರ್ ಇಂಡಿಯಾ ವಿಮಾನಯಾನವು ಭಾರೀ ನಷ್ಟ ಅನುಭವಿಸುತ್ತಿತ್ತು. ಹೀಗಾಗಿ ಸರ್ಕಾರವು ವಿಮಾನಗಳ ಷೇರು ಮಾರಾಟಕ್ಕೆ ಮುಂದಾಗಿತ್ತು. 2018ರಲ್ಲಿ ಶೇ.76ರಷ್ಟು ಷೇರು ಬಿಡ್ ಮಾಡಲು ಸಿದ್ಧವಿರುವುದಾಗಿ ಸರ್ಕಾರ ಘೋಷಣೆ ಮಾಡಿತ್ತು. ಆದರೆ ಇದಕ್ಕೆ ಯಾವ ಸಂಸ್ಥೆಯೂ ಮುಂದೆ ಬಂದಿರಲಿಲ್ಲ. ಆದ್ದರಿಂದ ಈ ಬಾರಿ ಶೇ.100ರಷ್ಟು ಹಣಕಾಸು ಬಿಡ್ಗೆ ಸರ್ಕಾರ ಘೋಷಣೆ ಮಾಡಿತ್ತು.ಟಾಟಾ ಗ್ರೂಪ್ ಮತ್ತು ಸ್ಪೈಸ್ ಜೆಟ್ ಲಿಮಿಟೆಡ್ ಸರ್ಕಾರಕ್ಕೆ ಬಿಡ್ ಸಲ್ಲಿಸಿದ್ದವು. ಇದೀಗ ಟಾಟಾ ಸನ್ಸ್ ವಿಜೇತ ಬಿಡ್ಡರ್ ಆಗಿ ಹೊರಹೊಮ್ಮಿದ್ದು, ಏರ್ ಇಂಡಿಯಾವನ್ನ ಮರುಪಡೆಯುವಲ್ಲಿ ಯಶಸ್ವಿಯಾಗಿದೆ.
ಕೇಂದ್ರ ಸರ್ಕಾರ ತನ್ನ ನಿರ್ಧಾರವನ್ನು ತಿಳಿಸುತ್ತಿದ್ದಂತೆ ಟಾಟಾ ಕಂಪನಿಯ ಮುಖ್ಯಸ್ಥ ರತನ್ ಟಾಟಾ Welcome back ಏರ್ ಇಂಡಿಯಾ ಎಂದು ಟ್ವೀಟ್ ಮಾಡಿ ಕೇಂದ್ರ ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿದ್ದಾರೆ.










