ದೀಪ ಬೆಳಗಿಸುವ ಮೂಲಕ ಕೊರೊನಾ ಅಂಧಕಾರವನ್ನು ದೂರವಾಗಿಸೋಣ : ದೇಶದ ಜನತೆಗೆ ಪ್ರಧಾನಿ ಮೋದಿ ಸಂದೇಶ…

164
firstsuddi

ನವದೆಹಲಿ : ಮಹಾಮಾರಿ ಕೊರೊನಾ ವೈರಸ್ ವಿರುದ್ಧ ಹೋರಾಡುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ವೀಡಿಯೋ ಮೂಲಕ ದೇಶದ ಜನತೆಗೆ ಮಹತ್ವದ ಸಂದೇಶವನ್ನು ಸಾರಿದ್ದಾರೆ. ಇಂದು ಬೆಳಿಗ್ಗೆ 9ಗಂಟೆಗೆ ಲೈವ್ ಬಂದ ಪ್ರಧಾನಿ ಮೋದಿ ಅವರು, ದೇಶದ ಎಲ್ಲಾ ಜನತೆಗೂ ನಮಸ್ಕಾರ, ಮಹಾಮಾರಿ ಕೊರೊನಾ ವೈರಸ್ ದೇಶಾದ್ಯಂತ ವ್ಯಾಪಕವಾಗಿ ಹರಡುತ್ತಿದೆ. ಹೀಗಾಗಿ ದೇಶವನ್ನು ಲಾಕ್‍ಡೌನ್ ಮಾಡಿ 9 ದಿನಗಳು ಕಳೆದಿದೆ. ಈ ಬಿಕ್ಕಟ್ಟಿನ ಸಮಯದಲ್ಲಿ ನೀವೆಲ್ಲರೂ ಒಗ್ಗೂಡಿರುವ ರೀತಿ ಶ್ಲಾಘನೀಯವಾಗಿದೆ. ಈ ಸಮಯದಲ್ಲಿ ಎಲ್ಲರೂ ಹೇಗೆ ಇರಬೇಕೆಂದು ಭಾರತೀಯರು ತೋರಿಸಿದ ರೀತಿ ಇಡೀ ಜಗತ್ತಿಗೆ ಸ್ಪೂರ್ತಿ ನೀಡಿದೆ. ಇತರ ರಾಷ್ಟ್ರಗಳು ಭಾರತದ ಲಾಕ್‍ಡೌನ್‍ಅನ್ನು ಉದಾಹರಣೆಯಾಗಿ ಪರಿಗಣಿಸಿದೆ. ಇದರಿಂದ ನಾವು ಕೊರೊನಾ ವಿರುದ್ಧ ಹೋರಾಡಬಹುದು, ಸರ್ಕಾರ, ಕಾನೂನು ಜನರು ಎಲ್ಲರೂ ಸೇರಿ ಕೊರೊನಾ ವಿರುದ್ಧ ಹೋರಾಡುತ್ತಿದ್ದಾರೆ.
ದೇಶದ ಕೋಟ್ಯಾಂತರ ಜನರು ಮನೆಯಲ್ಲೇ ಇದ್ದಾರೆ. ಎಲ್ಲರಿಗೂ ಮನೆಯಲ್ಲಿ ಕುಳಿತು ಏನು ಮಾಡಬಹುದು ಎನಿಸಬಹುದು. ಆದರೆ ಲಾಕ್‍ಡೌನ್ ಪಾಲನೆ ಮಾಡುವುದು ಮುಖ್ಯ. ಇದು ಒಬ್ಬರ ಹೋರಾಟವಲ್ಲ. ಇದಕ್ಕೆ ಸಾಮೂಹಿಕ ಶಕ್ತಿಯ ಅವಶ್ಯಕತೆ ಇದೆ. ಜನತಾ ಜನಾರ್ಧನ ಈಶ್ವರನ ರೂಪವಾಗಿದೆ. ಅಂಧಕಾರದ ನಡುವೆ ನಾವು ಪ್ರಕಾಶಮಾನವಾಗಿರಬೇಕು. ನಮ್ಮ ಬಡವರು ಕೊರೊನಾ ನಿರಾಸೆಯಿಂದ ಸಂಕಷ್ಟ ನಡುವೆ ಆಶಾಕಿರಣವಾಗಿದ್ದಾರೆ. ಹೀಗಾಗಿ ನಾವು ಕೊರೊನಾ ಎಂಬ ಅಂಧಕಾರದಿಂದ ಬೆಳಕಿನತ್ತ ಹೋಗುತ್ತಿದ್ದೇವೆ. ಹೀಗಾಗಿ ಏಪ್ರಿಲ್ 5ರಂದು ನಾವೆಲ್ಲರೂ ಒಗ್ಗಟ್ಟಾಗೋಣ. ಏ.5ಕ್ಕೆ ಮಹಾ ಶಕ್ತಿಯ ಜಾಗೃತಿ ಆಗಬೇಕಿದೆ. ಹೀಗಾಗಿ ಏಪ್ರಿಲ್ 5ರಂದು ಭಾನುವಾರ ರಾತ್ರಿ 9ಗಂಟೆಗೆ 9 ನಿಮಿಷಗಳ ಕಾಲ ಮನೆಯಲ್ಲಿನ ಲೈಟ್ ಸ್ವಿಚ್ ಆಫ್ ಮಾಡಿ. ಅಂದು ರಾತ್ರಿ ಮನೆಯೆದುರು ಅಥವಾ ಬಾಲ್ಕನಿಯಲ್ಲಿ ನಿಂತು ಕ್ಯಾಂಡಲ್, ಟಾರ್ಚ್ ಅಥವಾ ಮೊಬೈಲ್ ದೀಪ ಉರಿಸಿ. ಈ ಮೂಲಕ ಕೊರೊನಾ ವಿರುದ್ಧದ ಹೋರಾಟಕ್ಕೆ ಕೈಜೋಡಿಸಿ. ಆದರೆ ಈ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ರಸ್ತೆಗಿಳಿದು ಸಂಭ್ರಮಿಸಬೇಡಿ. ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಮರೆಯಬೇಡಿ ಎಂದರು.