ದೇಶದಲ್ಲಿ ಪ್ರಪ್ರಥಮವಾಗಿ ಅಸ್ಪೃಶ್ಯತಾ ನಿವಾರಣೆ ಕಾನೂನನ್ನು ಜಾರಿಗೆ ತಂದ ಪುಣ್ಯಾತ್ಮರು ನಾಲ್ವಡಿ ಕೃಷ್ಣರಾಜ ಒಡೆಯರ್: ಜಾಕೀರ್ ಹುಸೇನ್

71
firstsuddi

ಚಿಕ್ಕಮಗಳೂರು: ದೇಶದಲ್ಲಿ ಪ್ರಪ್ರಥಮವಾಗಿ ಅಸ್ಪೃಶ್ಯತಾ ನಿವಾರಣೆ ಕಾನೂನನ್ನು ಜಾರಿಗೆ ತಂದ ಪುಣ್ಯಾತ್ಮರು ನಾಡಪ್ರಭು ನಾಲ್ವಡಿ ಕೃಷ್ಣರಾಜ ಒಡೆಯರ್ ಎಂದು ಬಿಎಸ್‍ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಜಾಕೀರ್ ಹುಸೇನ್ ಹೇಳಿದರು.

ನಗರದ ಬಿಎಸ್‍ಪಿ ಕಚೇರಿಯಲ್ಲಿ ನಿನ್ನೆ ಏರ್ಪಡಿಸಿದ್ದ ಮೈಸೂರು ಮಹಾರಾಜ, ನಾಡಪ್ರಭು, ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

1918 ರಲ್ಲಿ ಮಿಲ್ಲರ್ಸ್ ಆಯೋಗ ರಚಿಸಿ ತುಳಿತಕ್ಕೊಳ್ಳಗಾದ ಸಮುದಾಯಗಳಿಗೆ ಮೀಸಲಾತಿ ಪ್ರಕಟಿಸಿದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು, ದೇಶದಲ್ಲಿ ಪ್ರಥಮ ಬಾರಿಗೆ ರಾಜಪ್ರಭುತ್ವದಲ್ಲಿ ಪ್ರಜಾಪ್ರತಿನಿಧಿ ಕಾಯ್ದೆ ಜಾರಿಗೆ ತಂದು ಆಡಳಿತದಲ್ಲಿ ಪ್ರಜೆಗಳಿಗೆ ಅಧಿಕಾರ ನೀಡಿದ ಭಾಗ್ಯದಾತರು ಎಂದರು.

37 ವರ್ಷಗಳ ಕಾಲ ರಾಜ್ಯಭಾರ ಮಾಡಿದ ಒಡೆಯರ್ ಅವರು ಇಡೀ ಮೈಸೂರು ರಾಜ್ಯವನ್ನೇ ಅಭಿವೃದ್ಧಿಯತ್ತ ಕೊಂಡೊಯ್ದರು. ಕೃಷ್ಣರಾಜಸಾಗರ ನಿರ್ಮಿಸಿ ಲಕ್ಷಾಂತರ ರೈತರ ಬದುಕನ್ನು ಬಂಗಾರವಾಗಿಸಿದರು. ಸಾವಿರಾರು ಕೆರೆಕಟ್ಟೆಗಳು ನಾಲೆಗಳನ್ನು ನಿರ್ಮಾಣ ಮಾಡುವ ಮೂಲಕ ಕೃಷಿಕರ ಬದುಕನ್ನು ಹಸನಾಗಿಸಿದರು ಎಂದು ತಿಳಿಸಿದರು.

ಬಿಎಸ್‍ಪಿ ರಾಜ್ಯ ಕಾರ್ಯದರ್ಶಿ ಕೆ.ಬಿ. ಸುಧಾ ಮಾತನಾಡಿ, ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಸಾಮಾಜಿಕ ನ್ಯಾಯದ ಹರಿಕಾರರಾಗಿದ್ದರು ಎಂದು ಹೇಳಿದರು.

ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರಿಂದ ರಾಜರ್ಷಿ ಬಿರುದು ಪಡೆದ ಅವರು ತಮ್ಮ ಆಡಳಿತದಲ್ಲಿ ಮೇಲು ಕೀಳೆನ್ನದೆ ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳನ್ನು ನೀಡಿದವರು ಎಂದರು.

ಬಿಎಸ್‍ಪಿ ಜಿಲ್ಲಾಧ್ಯಕ್ಷ ಕೆ.ಟಿ.ರಾಧಾಕೃಷ್ಣ ಮಾತನಾಡಿ, ಇಡೀ ಪ್ರಪಂಚಕ್ಕೆ ನಮ್ಮ ನೆಲವನ್ನು ಪರಿಚಯಿಸಿದ ಕೀರ್ತಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಗೆ ಸಲ್ಲುತ್ತದೆ ಎಂದು ತಿಳಿಸಿದರು.

ರಾಜ್ಯ ಕಾರ್ಯದರ್ಶಿ ಪಿ.ಪರಮೇಶ್ ಮಾತನಾಡಿ, ಒಡೆಯರ್ ಅವರ ರಾಜನೀತಿಯನ್ನು ಇಂದಿನ ರಾಜಕಾರಣಿಗಳು ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು.

ಜನ್ಮ ದಿನದ ಅಂಗವಾಗಿ ನಾಡಪ್ರಭು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಭಾವಚಿತ್ರಕ್ಕೆ ಸಾಮೂಹಿಕವಾಗಿ ಪುಷ್ಪನಮನ ಸಲ್ಲಿಸಲಾಯಿತು.
ಬಿಎಸ್‍ಪಿ ಜಿಲ್ಲಾ ಉಪಾಧ್ಯಕ್ಷ ಕೆ.ಆರ್. ಗಂಗಾಧರ್, ಬಿ.ಎಂ.ಶಂಕರ್, ಅಸೆಂಬ್ಲಿ ಸಂಯೋಜಕಿ ಕೆ.ಎಸ್. ಮಂಜುಳಾ, ಪದಾಧಿಕಾರಿಗಳಾದ ಬಕ್ಕಿ ಮಂಜುನಾಥ್, ರತ್ನ, ಪಿ.ಕೆ. ಮಂಜುನಾಥ್, ವಸಂತ, ನವೀನ್ ಉಪಸ್ಥಿತರಿದ್ದರು.