ಸ್ಲೀಪರ್ ಕೋಚ್ ಬಸ್​​ನಲ್ಲೇ ವಿಷ ಸೇವಿಸಿ ಮಲಗಿದ ಪ್ರೇಮಿಗಳು- ಯುವತಿ ಸಾವು…

69
firstsuddi

ಹಾವೇರಿ: ಸ್ಲೀಪರ್ ಕೋಚ್ ಬಸ್​​ನಲ್ಲೇ ವಿಷ ಸೇವಿಸಿ ಪ್ರೇಮಿಗಳು ಮಲಗಿದ್ದು, ಯುವತಿ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ರಾಣೆಬೆನ್ನೂರು ನಗರದ ಚಳಗೇರಿ ಟೋಲ್ ಬಳಿ ಇರುವ ಗ್ರೀನ್ ಪ್ಯಾಲೇಸ್ ಹೋಟೆಲ್ ಬಳಿ ನಡೆದಿದೆ.

ಹೇಮಾ ರಾಮಕೃಷ್ಣಪ್ಪ (20) ಮೃತಪಟ್ಟ ಯುವತಿ. ಯುವಕ ಚೇತರಿಸಿಕೊಂಡು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾನೆ.

ಬಾಗಲಕೋಟೆ ಮೂಲದ ಅಖಿಲ್ ಮತ್ತು ಅಂತಿಮ ವರ್ಷದ ಬಿಕಾಂ ಓದುತ್ತಿದ್ದ ಬೆಂಗಳೂರು ಮೂಲದ ಹೇಮಾ ರಾಮಕೃಷ್ಣಪ್ಪ ಪರಸ್ಪರ ಪ್ರೀತಿಸುತ್ತಿದ್ದು, ಮದುವೆಯಾಗಲು ನಿರ್ಧರಿಸಿದ್ದಾರೆ. ಆದರೆ ಪ್ರೇಮ ವಿವಾಹಕ್ಕೆ ಪೋಷಕರು ವಿರೋಧ ವ್ಯಕ್ತಪಡಿಸಿದ್ದಾರೆ. ಇದರಿಂದ ನೊಂದ ಅಖಿಲ್ ಮತ್ತು ಹೇಮಾ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದಾರೆ.

ತಮ್ಮ ಪ್ರೇಮ ವಿವಾಹಕ್ಕೆ ಪೋಷಕರು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆ ನೊಂದ ಪ್ರೇಮಿಗಳು ಸ್ಲೀಪರ್ ಕೋಚ್ ಬಸ್ ಹತ್ತಿದ್ದಾರೆ. ನಂತರ ವಿಷ ಸೇವಿಸಿಕೊಂಡ ಅಖಿಲ್ ಮತ್ತು ಹೇಮಾ ನಿದ್ರಿಸಿದ್ದಾರೆ. ಊಟಕ್ಕೆಂದು ಮಾರ್ಗಮಧ್ಯೆ ಹೋಟೆಲ್ ಬಳಿ ಬಸ್ ನಿಲ್ಲಿಸಿದ್ದಾಗ ವಿಷದ ವಾಸನೆ ಬರುವುದನ್ನು ಗಮನಿಸಿದ ಪ್ರಯಾಣಿಕರು ಪರಿಶೀಲನೆ ನಡೆಸಿದಾಗ ಆತ್ಮಹತ್ಯೆಗೆ ಯತ್ನಿಸಿರುವುದು ಬೆಳಕಿಗೆ ಬಂದಿದೆ.

ಕೂಡಲೇ ಎಚ್ಚೆತ್ತ ಪ್ರಯಾಣಿಕರು ಸ್ಥಳೀಯರ ಸಹಾಯದಿಂದ ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಿದ್ದರೂ ದುರಾದೃಷ್ಟವಶಾತ್ ಹೇಮಾ ಕೊನೆಯುಸಿರೆಳೆದಿದ್ದಾಳೆ. ಪ್ರಜ್ಞೆ ಕಳೆದುಕೊಂಡಿದ್ದ ಅಖಿಲ್ ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದು, ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ.

ಘಟನೆ ಸಂಬಂಧ ರಾಣೆಬೆನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.