ದೊರೆಸ್ವಾಮಿ ಅವರ ವಿರುದ್ಧ ಯತ್ನಾಳ್ ನಿಂದನಾತ್ಮಕ ಹೇಳಿಕೆ- ಬಿಜೆಪಿ ನಾಯಕರ ನಾಲಗಗೆ ಕಡಿವಾಣ ಹಾಕದಿದ್ದರೆ ಅನಾಹುತ ಕಾದಿದೆ ಎಂದು ಎಚ್ಚರಿಸಿದ ಮಾಜಿ ಸಿಎಂ…

193
firstsuddi

ಬೆಂಗಳೂರು : ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಹಿರಿಯ ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ಅವರ ವಿರುದ್ಧ ನಿಂದನಾತ್ಮಕ ಹೇಳಿಕೆ ನೀಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಟ್ವಿಟರ್ ಮೂಲಕ ಬಿಜೆಪಿ ನಾಯಕರ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಟ್ವಿಟರ್‍ನಲ್ಲಿ, ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ ಅವರೇ ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾದ ಹೆಚ್.ಎಸ್. ದೊರೆಸ್ವಾಮಿ ಅವರನ್ನು ನಿಂದಿಸಿ ಅತ್ಯಂತ ಕೀಳಾಗಿ ಮಾತನಾಡಿರುವ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಕ್ರಮಕೈಗೊಂಡು ಬಾಯಿ ಮುಚ್ಚಿಸಿ, ಇಲ್ಲವಾದರೆ ಅವರ ಅಭಿಪ್ರಾಯ ನಿಮ್ಮ ಸರ್ಕಾರದ ಅಭಿಪ್ರಾಯ ಎಂದು ಒಪ್ಪಿಕೊಳ್ಳಿ. ಕೈ ಮೀರಿ ಹೋಗುವ ಮುನ್ನ ಎಚ್ಚೆತ್ತುಕೊಳ್ಳಿ, ದೆಹಲಿ ಗಲಭೆ ಕಣ್ಣ ಮುಂದಿದೆ, ಒಬ್ಬರಾದ ಮೇಲೆ ಒಬ್ಬರಂತೆ ಪ್ರಚೋದನಕಾರಿ ಹೇಳಿಕೆ ನೀಡುತ್ತಿರುವ ರಾಜ್ಯದ ಬಿಜೆಪಿ ನಾಯಕರ ನಾಲಗಗೆ ತಕ್ಷಣ ಕಡಿವಾಣ ಹಾಕದಿದ್ದರೆ ಅನಾಹುತ ಕಾದಿದೆ ಎಂದು ಟ್ವೀಟ್ ಮಾಡಿದ್ದಾರೆ.

ನಿನ್ನೆ ವಿಜಯಪುರದಲ್ಲಿ ಯತ್ನಾಳ್ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಾ, ದೇಶದ್ರೋಹಿಗಳಿಗೆ ಬೀಳುತ್ತವೆ ಗುಂಡೇಟು, ದೇಶದ್ರೋಹಿಗಳೇ ಹುಷಾರ್. ಇನ್ನು ಮುಂದೆ ಹಾಗೆಲ್ಲ ಮಾಡಿದರೆ ಗುಂಡೇಟು ಬೀಳುತ್ತವೆ. ಜೈಲಿಗೆ ಕಳುಹಿಸುವುದೆಲ್ಲ ಇಲ್ಲ, ಇನ್ಮೇಲೆ ದೇಶದ್ರೋಹದ ಹೇಳಿಕೆ ಕೊಟ್ಟರೆ ಅವರಿಗೆ ಗುಂಡು ಬೀಳುತ್ತೆ ಎನ್ನುವ ಮೂಲಕ ದೇಶದ್ರೋಹಿಗಳಿಗೆ ಎಚ್ಚರಿಕೆ ನೀಡಿದ್ದರು. ಅಷ್ಟೇ ಅಲ್ಲದೇ ಅವರು ದೊರೆಸ್ವಾಮಿ ನಕಲಿ ಸ್ವಾತಂತ್ರ್ಯ ಹೋರಾಟಗಾರ. ಎಲ್ಲಿದ್ದಾನೆ ಆ ಮುತ್ಯಾ ಈಗ, ದೊರೆಸ್ವಾಮಿ ಪಾಕಿಸ್ತಾನ ಏಜೆಂಟ್. ಪಾಕಿಸ್ತಾನ ಏಜೆಂಟರಂತೆ ದೊರೆಸ್ವಾಮಿ ಮಾತನಾಡುತ್ತಿದ್ದಾನೆ ಎಂದು ಕಿಡಿಕಾರಿದ್ದರು.