ಮೂಡಿಗೆರೆ: ಕಡಿದಾಳು ಸರ್ಕಾರಿ ಶಾಲೆಗೆ ಬೇಕಿದೆ ಕಾಯಕಲ್ಪ…

535
firstsuddi
  • ವರದಿ: ಕಡಿದಾಳು ಪುನೀತ್ 

ಮೂಡಿಗೆರೆ: ಕಡಿದಾಳು ಸರ್ಕಾರಿ ಶಾಲೆ ನಿನ್ನೆ ಮೊನ್ನೆಯದೇನಲ್ಲ ದೇಶಕ್ಕೆ ಸ್ವಾತಂತ್ರ್ಯ ಬಂದ ಸಂದರ್ಭದಲ್ಲಿ ಸ್ಥಳೀಯರ ಒತ್ತಾಯದ ಮೇಲೆ ನಿರ್ಮಾಣವಾದ 80 ವರ್ಷಕ್ಕೂ ಹಳೆಯದಾದ ಶಾಲೆ. ಆದರೆ ಇಂದು ಸರಿಯಾದ ಮೂಲಭೂತ ಸೌಕರ್ಯಗಳ ಕೊರತೆಯಿಂದಾಗಿ ನಲುಗಿಹೋಗಿದ್ದು ಪುನರ್ ನವೀಕರಣಕ್ಕಾಗಿ ಎದುರುನೋಡುತ್ತಿದೆ.

     ಅಂಗನವಾಡಿ ಸೇರಿದಂತೆ 1 ರಿಂದ 5 ನೇ ತರಗತಿವರೆಗೆ ಶಿಕ್ಷಣ ನೀಡುತ್ತಿರುವ ಇಲ್ಲಿನ ಶಾಲೆ ಕಾಲಕಾಲಕ್ಕೆ ಅಭಿವೃದ್ಧಿ ಕಾಣದೆ ನಲುಗುತ್ತಿದೆ. ಇಬ್ಬರು ಶಿಕ್ಷಕರನ್ನು ಒಳಗೊಂಡ ಶಾಲೆ ಮೂಲಭೂತ ಸೌಕರ್ಯಗಳು ಹಾಗೂ ಉತ್ತಮ ಶಿಕ್ಷಣದ ಕೊರೆತೆಯಿಂದಾಗಿ ಮಕ್ಕಳಿಲ್ಲದೆ ಮುಚ್ಚುವ ಹಂತಕ್ಕೆ ಬಂದು ನಿಂತಿದೆ. ಈ ಶಾಲೆಗೆ ಸರಿಯಾದ ಕಾಂಪೌಂಡ್ ಇಲ್ಲ. ವಿದ್ಯಾರ್ಥಿಗಳು ಹತ್ತಿಕೊಂಡು ಬರುವ ಸೈಕಲ್, ಶಿಕ್ಷಕರ ಬೈಕುಗಳಿಗೆ ಸೂಕ್ತ ರಕ್ಷಣೆ ಇಲ್ಲ. ಮುಖ್ಯ ರಸ್ತೆಗೆ ಹೊಂದಿಕೊಂಡಂತೆ ಇರುವ ಈ ಶಾಲೆಗೆ ಕಾಂಪೌಂಡ್ ಇಲ್ಲದೆ ಇರುವುದುರಿಂದ ಸಾರ್ವಜನಿಕರು ಶಾಲೆಯ ಪಕ್ಕದಲ್ಲಿಯೇ ವಾಹನಗಳನ್ನು ನಿಲ್ಲಿಸುತ್ತಿದ್ದಾರೆ. ಅಲ್ಲದೆ ಕೃಷಿಗೆ ಸಂಬಂಧಿಸಿದ ಉಪಕರಣಗಳನ್ನು ಕ್ರೋಢೀಕರಣ ಮಾಡುತ್ತಿರುವುದುರಿಂದ ಶಾಲೆಯ ಮಕ್ಕಳಿಗೆ ದಿನನಿತ್ಯ ಆಟ-ಪಾಠಗಳಿಗೆ ತೊಂದರೆಯಾಗುತ್ತಿದೆ. 

    ಇನ್ನು ಶಾಲೆಯ ಕಟ್ಟಡಗಳ ವಿಚಾರಕ್ಕೆ ಬಂದರೆ ಶಾಲಾ ಕಟ್ಟಡಗಳ ಗೋಡೆಗಳು ಬಿರುಕು ಬಿಟ್ಟಿದ್ದು ಕುಸಿಯುವ ಹಂತದಲ್ಲಿದೆ. ಪ್ರತೀ ಬಾರಿಯ ಮಳೆಗಾಲದಲ್ಲಿ ಭಯದಿಂದ ಪಾಠ ಕೇಳುವ ಇರಾದೆ ಮಕ್ಕಳದ್ದು. ಕಟ್ಟಡಗಳ ದ್ವಾರದ ಬಾಗಿಲುಗಳು ಗೆದ್ದಲು ಹಿಡಿದಿದ್ದು, ತಾತ್ಕಾಲಿಕವಾಗಿ ಕೆಲವು ಬಾಗಿಲುಗಳಿಗೆ ಮರದ ಪಟ್ಟಿಯಿಂದ ಮುಚ್ಚಲಾಗಿದೆ. ಶಾಲೆಯ ಬಹುತೇಕ ಕೊಠಡಿಗಳ ಕಿಟಕಿಗಳು ಕೆಲವು ಮುರಿಯುವ ಹಂತದಲ್ಲಿವೆ. ಮಳೆಗಾಲದಲ್ಲಿ ಮಕ್ಕಳ ಪರಿಸ್ಥಿತಿ ಚಿಂತಾಜನಕವಾಗಿದ್ದು ಬಹುತೇಕ ಕೊಠಡಿಗಳಲ್ಲಿ ಮಳೆ ನೀರು ಸೋರುತ್ತಿದೆ. ಶುದ್ಧವಾದ ಕುಡಿಯುವ ನೀರು ಕನಸಿನ ಮಾತಾಗಿದೆ. ಕುಡಿಯುವ ನೀರಿಗಾಗಿ ಟ್ಯಾಂಕ್ ನಿರ್ಮಾಣವಾಗಿದ್ದರೂ ಸಹ ಕರೆಂಟ್ ಅಭಾವದಿಂದ ಹಲವು ಬಾರಿ ಹೊರಗಿನಿಂದ ನೀರು ಹೊತ್ತು ತರಬೇಕಾದ ಪರಿಸ್ಥಿತಿ ಇದೆ. ಹೀಗಾಗಿ ಮಕ್ಕಳ ಬಿಸಿಯೂಟದ ಅಡುಗೆಗೆ ಸಾಕಷ್ಟು ಬಾರಿ ತೊಂದರೆಯಾಗುತ್ತಿದೆ ಎಂದು ಸ್ಥಳೀಯ ಪ್ರಕಾಶ್ ಅವರು ದೂರಿದ್ದಾರೆ.

     ಶಾಲೆಗೆ ಹೊಂದಿಕೊಂಡಂತೆ ಕಾಫಿ ತೋಟ ಇರುವುದರಿಂದ ಆಗಾಗ್ಗೆ ಹಾವು ಮುಂಗುಸಿಗಳು ಶಾಲೆಗೆ ಆಗಮಿಸುವುದರಿಂದ ಮಕ್ಕಳು ಜೀವಭಯದಿಂದ ತತ್ತರಿಸಿಹೋಗುತ್ತಿದ್ದಾರೆ. ಶಾಲೆಗೆ ಸೂಕ್ತ ಬಂದೋ ಬಸ್ತ್ ಇಲ್ಲದ ಕಾರಣ ಬಿಸಿಯೂಟ ಮಾಡಿದ ವಿದ್ಯಾರ್ಥಿಗಳು ತಟ್ಟೆ ತೊಳೆಯಲು ಹೋದಾಗ ನಾಯಿಗಳು ಹಿಂಡು ಹಿಂಡಾಗಿ ಮೈ ಮೇಲೆ ಎರಗುತ್ತಿವೆ. ಬೇಸಿಗೆ ಕಾಲದಲ್ಲಿ ನೀರಿನ ಬವಣೆ ಜಾಸ್ತಿಯಾಗುವುದರಿಂದ ಬಹಳ ತೊಂದರೆಯಾಗುತ್ತಿದೆ. ಶಾಲೆಗಳಲ್ಲಿ ಪುಸ್ತಕ ಬಂಢಾರವಿದ್ದರೂ ಸಹ ಪುಸ್ತಕ ಸಂಗ್ರಹಕ್ಕೆ ಸೂಕ್ತ ವ್ಯವಸ್ಥೆ ಇಲ್ಲದಿರುವುದರಿಂದ ಬಹುತೇಕ ಪುಸ್ತಕಗಳು ಹಾನಿಯಾಗುತ್ತಿವೆ. ಶಾಲೆಗೆ 5 ಶಿಕ್ಷಕರ ಅವಶ್ಯಕತೆ ಇದ್ದು ಕೇವಲ 2 ಶಿಕ್ಷಕಿಯರನ್ನು ನಿಯೋಜನೆ ಮಾಡಿರುವುದರಿಂದ ಉತ್ತಮ ಗುಣಮಟ್ಟದ ಶಿಕ್ಷಣಕ್ಕೆ ತೊಂದರೆಯಾಗುತ್ತಿದೆ ಎಂದು ವಿದ್ಯಾರ್ಥಿಗಳಾದ ಧನುಶ್, ನಾಗರಾಜ್, ಭವಾನಿ, ಪ್ರೇಮ ಅವರು ತಮ್ಮ ಅಳಲು ತೋಡಿಕೊಂಡಿದ್ದಾರೆ.

    ಶೀಘ್ರವಾಗಿ ಶಾಲೆಯ ಬಾಗಿಲುಗಳು ಹಾಗೂ ಕಿಟಕಿಗಳು ಹಾಗೂ ಶಾಲೆಯ ಕಟ್ಟಡಗಳ ದುರಸ್ಥಿ ಆಗಬೇಕಿದೆ. ಮಕ್ಕಳಿಗೆ ಸರಿಯಾದ ಶೌಚಾಲಯದ ವ್ಯವಸ್ಥೆ ಇಲ್ಲದಿರುವುದರಿಂದ ಬಹುತೇಕ ಮಕ್ಕಳು ಬಯಲು ಶೌಚಾಲಯವನ್ನು ಅವಲಂಬಿಸಿದ್ದಾರೆ. ಸ್ವಚ್ಚ ಭಾರತದ ಪರಿಕಲ್ಪನೆ ಬಗ್ಗೆ ಪಾಠ ಮಾಡುವಾಗ ಶಾಲೆಯ ಶೌಚಾಲಯದ ಬಗ್ಗೆ ಪ್ರಶ್ನೆ ಕೇಳಿದಾಗ ಶಿಕ್ಷಕರು ಹಲವು ಬಾರಿ ಮುಜುಗರಕ್ಕೆ ಒಳಗಾಗಬೇಕಾಗುತ್ತದೆ. ಸ್ಥಳೀಯ ಮುಖಂಡರು, ಜನಪ್ರತಿನಿಧಿಗಳು ಹಾಗೂ ಎಸ್.ಡಿ.ಎಂ.ಸಿ ಸದಸ್ಯರುಗಳು ಶಾಲೆಯ ಮೂಲಭೂತ ಅವಶ್ಯಕತೆಗಳ ಬಗ್ಗೆ ಗಮನಹರಿಸಿದರೆ ಒಳಿತು ಎಂದು ಶಿಕ್ಷಕ ಬೇಸರ ವ್ಯಕ್ತಪಡಿಸಿದರು.

    ಉನ್ನತ ಅಧಿಕಾರಿಗಳು, ಜನಪ್ರತಿನಿಧಿಗಳು, ಉತ್ತಮ ನಾಗರೀಕರನ್ನು ಸಮಾಜಕ್ಕೆ ಕೊಡುಗೆ ನೀಡಿದ ಕಡಿದಾಳು ಪ್ರಾಥಮಿಕ ಶಾಲೆಯ ದುರಸ್ಥಿಗೆ ತಡ ಮಾಡಿದರೆ ಅನಾಹುತ ಸಂಭವಿಸುವ ಲಕ್ಷಣಗಳಿವೆ. ಸರ್ಕಾರ ಮತ್ತು ಜನಪ್ರನಿಧಿಗಳು ಇದನ್ನು ಗಮನದಲ್ಲಿಟ್ಟುಕೊಂಡು ಉತ್ತಮ ವಾತಾವರಣದ ಶಿಕ್ಷಣ ನೀಡುವತ್ತ ಗಮನಹರಿಸಿ ಶಾಲೆಯ ಅಭಿವೃದ್ಧಿಗೆ ಸಹಕಾರ ಹಸ್ತ ಚಾಚಬೇಕಿದೆ.