ಬೆಂಗಳೂರು : ವಿವಾದಿತ ಟ್ವಿಟರ್ ಪೋಸ್ಟ್ ಪ್ರಕರಣದಲ್ಲಿ ಇಂದು ಬೆಳಗ್ಗೆ ನಟ ಚೇತನ್ ನನ್ನು ಬಂಧಿಸಿದ ಶೇಷಾದ್ರಿಪುರಂ ಪೊಲೀಸರು ನಗರದ ಎಸಿಎಂಎಂ ಕೋರ್ಟ್ಗೆ ಹಾಜರುಪಡಿಸಿದ್ದರು. ಪೊಲೀಸರು ಹಾಕಿರುವ ಎಫ್ ಐಆರ್ ಆಧರಿಸಿ ನ್ಯಾಯಾಲಯವು ಚೇತನ್ ಅವರಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದೆ.
ಈ ಸಂದರ್ಭದಲ್ಲಿ ಚೇತನ್ ಪರ ವಕೀಲರು ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ನ್ಯಾಯಾಲಯವು ಜಾಮೀನು ಅರ್ಜಿ ವಿಚಾರಣೆಯನ್ನು ಮುಂದೂಡಿಕೆ ಮಾಡಿದೆ.
ಚೇತನ್ ಅವರು ಹಿಂದುತ್ವದ ಬಗ್ಗೆ ಆಕ್ಷೇಪಾರ್ಹ ಪೋಸ್ಟ್ ಮಾಡಿದ್ದರು. ಈ ಕುರಿತು ಶಿವಕುಮಾರ್ ಎನ್ನುವವರು ಶೇಷಾದ್ರಿಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರಿನಲ್ಲಿ ಚೇತನ್ ಅವರು ಹಿಂದೂ ಭಾವನೆಗಳಿಗೆ ಧಕ್ಕೆ ತರುವ ರೀತಿಯಲ್ಲಿ ಟ್ವೀಟ್ ಮಾಡಿದ್ದಾರೆ ಎಂದು ಉಲ್ಲೇಖಿಸಿದ್ದಾರೆ. ಈ ದೂರನ್ನು ಆಧರಿಸಿ ಶೇಷಾದ್ರಿಪುರಂ ಪೊಲೀಸರು ವಶಕ್ಕೆ ಪಡೆದು, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.










