ಬೆಳಗಾವಿ : ನಮಗೆ ಯಾರು ಕೂಡ ಮಾತನಾಡಬೇಡಿ ಅಂತ ಹೇಳಿಲ್ಲ. ಆದರೆ, ನಮ್ಮ ಹೇಳಿಕೆಯಿಂದ ಪಕ್ಷಕ್ಕೆ ಮುಜುಗರ ಆಗಬಾರದೆಂಬ ಜ್ಞಾನ ನಮಗೂ ಇದೆ. ಅವರು ನಮಗೆ ಹೇಳಬೇಕು ಎಂದೇನೂ ಇಲ್ಲ ಎಂದು ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ. ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ನಿನ್ನೆ ರಾತ್ರಿ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಎಲ್ಲೂ ಸಹ ನಾವು ಅಧ್ಯಕ್ಷರ ಬದಲಾವಣೆ ಕುರಿತು ಪ್ರಸ್ತಾಪ ಮಾಡಿಲ್ಲ. ನೈಜ ಸ್ಥಿತಿ ಹೇಳಲು ಹೋದಾಗ ಅದು ಬೇರೆ ಇರುತ್ತದೆ. ಅದನ್ನೆ ಬಿಂಬಿಸಲು ಹೋದರೆ ನಮಗೆ ಮತ್ತು ಪಕ್ಷಕ್ಕೂ ಕಷ್ಟ ಆಗುತ್ತದೆ. ಅಧ್ಯಕ್ಷರ ಬದಲಾವಣೆ ಮಾಡುವ ಅಧಿಕಾರ ನಮಗಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿದರು. ನಾನು ಗೃಹ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಅಧ್ಯಕ್ಷನಾಗಿ ಮುಂದುವರಿದಿದ್ದೆ ಎಂಬ ಡಾ.ಜಿ ಪರಮೇಶ್ವರ್ ಹೇಳಿಕೆ ಕುರಿತು, ಆ ರೀತಿ ನಾವು ಏನು ಹೇಳಿಲ್ಲ. ನಾವೇನಿದ್ದರೂ ಹೈಕಮಾಂಡ್ ಅಂತಾನೇ ಹೇಳುತ್ತಿದ್ದೇವೆ. ಆ ವಿಚಾರ ನಮ್ಮ ವ್ಯಾಪ್ತಿಗೆ ಬರುವುದಿಲ್ಲ. ನಾವು ಏನೋ ಹೇಳುವುದರಿಂದ ಪಕ್ಷಕ್ಕೆ ಮುಜುಗರ ಆಗಬಾರದು ಅಂತಾ ಸ್ಪಷ್ಟೀಕರಣ ಕೊಟ್ಟಿದ್ದೇವೆ ಎಂದು ಹೇಳಿದರು. ಸಿಎಲ್‍ಪಿ ಸಭೆಯಲ್ಲಿ ಬೆಳಗಾವಿ ಕಾಂಗ್ರೆಸ್ ಕಚೇರಿ ನಿರ್ಮಾಣದಲ್ಲಿ ರಮೇಶ್ ಜಾರಕಿಹೊಳಿ ಸಹಾಯ ಮಾಡಿದ್ದರು ಎಂದು ಅವರ ಹೆಸರು ನಾನೇ ಪ್ರಸ್ತಾಪ ಮಾಡಿದ್ದೆ. ಕಟ್ಟಡ ನಿರ್ಮಾಣದಲ್ಲಿ ಯಾರ್ಯಾರು ಕೊಡುಗೆ ಕೊಟ್ಟಿದ್ದಾರೆ ಅವರಿಗೆಲ್ಲಾ ಅದರ ಶ್ರೇಯಸ್ಸು ಹೋಗಬೇಕು. ಯಾರೋ ಒಬ್ಬರಿಗೆ ಅದರ ಶ್ರೇಯಸ್ಸು ಹೋಗಬಾರದು ಅಂತಾ ತಿಳಿಸಿದ್ದೇನೆ ಎಂದು ಹೇಳಿದರು.