ಬೆಂಗಳೂರು : ಪಾಕಿಸ್ತಾನದ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ಜರ್ದಾರಿ ಹೇಳಿಕೆಯು ನಾಯಿ ಬಾಲ ಎಂದಿಗೂ ಡೊಂಕು ಎಂಬಂತಹ ಪ್ರವೃತ್ತಿಯನ್ನು ಸಾಬೀತುಪಡಿಸುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ವಾಗ್ದಾಳಿ ನಡೆಸಿದ್ದಾರೆ.
ಈ ಸಂಬಂಧ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, ಪಾಕಿಸ್ತಾನದ ವಿದೇಶಾಂಗ ಸಚಿವರಾಗಿ ಅವರ ಹೇಳಿಕೆಯು ಪಾಕಿಸ್ತಾನ ಸರ್ಕಾರದ ನೀಚ ಮನೋಸ್ಥಿತಿಯನ್ನು ಪ್ರತಿಬಿಂಬಿಸಿದೆ. ಇಡೀ ವಿಶ್ವದಲ್ಲಿಯೇ ಶಾಂತಿ ನೆಲೆಸುವಂತಾಗಲು ಭಾರತದ ಪ್ರಧಾನಿಯವರು ನೇತೃತ್ವ ವಹಿಸಬೇಕೆಂದು ವಿಶ್ವದ ಎಲ್ಲಾ ಪ್ರಮುಖ ದೇಶಗಳು ಕೋರುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಪಾಕಿಸ್ತಾನದ ವಿದೇಶಾಂಗ ಸಚಿವರಿಂದ ಇಂತಹ ಹೇಳಿಕೆಯು ನಾಯಿ ಬಾಲ ಎಂದಿಗೂ ಡೊಂಕು ಎಂಬಂತಹ ಪ್ರವೃತ್ತಿಯನ್ನು ಸಾಬೀತುಪಡಿಸುತ್ತಿದೆ ಎಂದು ಕಿಡಿಕಾರಿದ್ದಾರೆ.
ವಿಶ್ವದ ಅತ್ಯುಗ್ರ ಒಸಾಮ ಬಿನ್ ಲಾಡೆನ್ ಎಲ್ಲಿ ಅಡಗಿ ಕುಳಿತಿದ್ದ, ಮತ್ತು ಅವನನ್ನು ಪೋಷಿಸುತ್ತಿದ್ದವರು ಯಾರು ಹಾಗೂ ವಿಶ್ವದ ಬಹುತೇಕ ಉಗ್ರ ಸಂಘಟನೆಗಳಿಗೆ ತವರು ನೆಲೆ ಪಾಕಿಸ್ತಾನ ಎಂಬುದು ಇಡೀ ಜಗತ್ತಿಗೆ ತಿಳಿದಿದೆ. ಹೀಗಿರುವಾಗ ನರೇಂದ್ರ ಮೋದಿಯಂತಹ ವಿಶ್ವ ನಾಯಕರ ಬಗ್ಗೆ ಟೀಕೆ ಮಾಡಿದರೆ, ಜಗತ್ತಿನ ಕಣ್ಣಿನಲ್ಲಿ ಅವರು ದೊಡ್ಡ ವ್ಯಕ್ತಿಯಾಗುತ್ತೇನೆಂದು ಭಾವಿಸಿರುವಂತೆ ಕಾಣುತ್ತಿದೆ ಎಂದರು.
ವಿಶ್ವಸಂಸ್ಥೆಯಲ್ಲಿ ಗುರುವಾರ ವಿದೇಶಾಂಗ ಸಚಿವ ಜೈಶಂಕರ್ ಪಾಕಿಸ್ತಾನವನ್ನು ತರಾಟೆಗೆ ತೆಗೆದುಕೊಂಡಿದ್ದರು. ಒಸಾಮಾ ಬಿನ್ ಲಾಡೆನ್ ಗೆ ಆಶ್ರಯ ಕೊಟ್ಟವರಿಂದ ನಾವು ನೀತಿಪಾಠ ಹೇಳಿಸಿಕೊಳ್ಳಬೇಕಾದ ಅಗತ್ಯವಿಲ್ಲ ಎಂದು ಪಾಕಿಸ್ತಾನವನ್ನು ಚುಚ್ಚಿದ್ದರು. ಇದರಿಂದ ವಿಶ್ವಸಂಸ್ಥೆ ವೇದಿಕೆಯಲ್ಲಿ ತೀವ್ರ ಮುಜುಗರ ಅನುಭವಿಸಿದ್ದ ಪಾಕ್ ವಿದೇಶಾಂಗ ಮಂತ್ರಿ ಬಿಲಾವಲ್ ಭುಟ್ಟೋ, ನ್ಯೂಯಾಕ್ ನಲ್ಲಿ ವಿಶ್ವಸಂಸ್ಥೆ ಭದ್ರತಾ ಮಂಡಳಿ ಸುದ್ದಿಗೋಷ್ಠಿಯಲ್ಲಿ ಪ್ರಧಾನಿ ಮೋದಿ ವಿರುದ್ಧ ಹರಿಹಾಯ್ದಿದ್ದಾರೆ.
ಭಾರತದ ಪ್ರಧಾನಿ ಮೋದಿ ಆರ್ಎಸ್ಎಸ್ನವರು.ವಿದೇಶಾಂಗ ಮಂತ್ರಿಯೂ ಆರ್ ಎಸ್ ಎಸ್ ನವರು. ಆರ್ ಎಸ್ ಎಸ್ ಎಂಬುದು ಹಿಟ್ಲರ್ ನಿಂದ ಪ್ರಭಾವಿತವಾಗಿ ಸೃಷ್ಟಿಯಾಗಿರುವ ಸಂಸ್ಥೆ. ಭಾರತ ಯಾವಾಗಲು ನಮ್ಮನ್ನು ಬೇಕಂತಲೇ ಟಾರ್ಗೆಟ್ ಮಾಡುತ್ತದೆ. ವಿಶ್ವ ಸಮುದಾಯದ ಕಣ್ಣಲ್ಲಿ ಎಲ್ಲಾ ಮುಸ್ಲಿಮರನ್ನು ಉಗ್ರರನ್ನಾಗಿ ಬಿಂಬಿಸುತ್ತಿದೆ. ಆದರೆ ಪಾಕಿಸ್ತಾನ ಕೂಡ ಉಗ್ರಬಾಧಿತ ದೇಶ ಎಂದು ಭುಟ್ಟೋ ಹೇಳಿಕೆ ನೀಡಿದ್ದಾರೆ.
ಭಾರತಕ್ಕಿಂತ ಹೆಚ್ಚು ಜನರು ಭಯೋತ್ಪಾದನೆಗೆ ಬಲಿಯಾಗಿದ್ದಾರೆ. ಪಾಕಿಸ್ತಾನಕ್ಕೆ ಭಯೋತ್ಪಾದನೆಯನ್ನು ಬೆಂಬಲಿಸಲು ಯಾವುದೇ ಕಾರಣವಿಲ್ಲ. ಒಸಾಮಾ ಬಿನ್ ಲಾಡೆನ್ ಸತ್ತಿದ್ದರೂ, ಗುಜರಾತ್ನ ಕಟುಕ ಇನ್ನೂ ಜೀವಂತವಾಗಿದ್ದಾನೆ. ನರೇಂದ್ರ ಮೋದಿ ಭಾರತದ ಪ್ರಧಾನಿಯಾಗುವುದಕ್ಕೂ ಮೊದಲು ಅಮೆರಿಕ ಪ್ರವೇಶವನ್ನು ನಿಷೇಧಿಸಲಾಗಿತ್ತು ಎಂದು ಹೇಳಿದ್ದಾರೆ.










