ನವದೆಹಲಿ : ಶ್ರದ್ಧಾ ವಾಕರ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಅಫ್ತಾಬ್ ಪೂನಾವಾಲಾ ಜಾಮೀನು ಅರ್ಜಿ ವಿಚಾರಣೆಯನ್ನು ಡಿಸೆಂಬರ್ 22ಕ್ಕೆ ಕೋರ್ಟ್ ಮುಂದೂಡಿದೆ.
ಆರೋಪಿಯನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶೆ ವೃಂದಾ ಕುಮಾರಿ ಎದುರು ಹಾಜರುಪಡಿಸಲಾಯಿತು. ಈ ವೇಳೆ ಜಾಮೀನು ಅರ್ಜಿಯನ್ನು ಬಾಕಿ ಇರಿಸಲಾಗುವುದು ಮತ್ತು ಆರೋಪಿ ವಕೀಲರನ್ನು ಭೇಟಿಯಾದ ನಂತರವೇ ಮನವಿಯನ್ನು ಇರಿಸಬೇಕೇ ಅಥವಾ ಬೇಡವೇ ಎಂಬುದನ್ನು ನಿರ್ಧರಿಸಲಾಗುವುದು ಎಂದು ನ್ಯಾಯಾಧೀಶರು ಹೇಳಿದರು.
ಅಫ್ತಾಬ್ ಪೂನಾವಾಲಾ ಶ್ರದ್ಧಾಳನ್ನು ಹತ್ಯೆಗೈದು ಬಳಿಕ ದೇಹವನ್ನು 35 ತುಂಡುಗಳನ್ನಾಗಿ ಮಾಡಿ ಕಾಡುಗಳಲ್ಲಿ ಹೂತು ಹಾಕಿದ್ದ. ಈ ದೇಹದ ಭಾಗಗಳನ್ನು ತನಿಖೆಯ ವೇಳೆ ಪೊಲೀಸರು ಸಂಗ್ರಹಿಸಿದ್ದರು. ಅವುಗಳನ್ನು ಡಿಎನ್ ಎ ಪರೀಕ್ಷೆಗೆ ಒಳಪಡಿಸಿದಾಗ ಶ್ರದ್ಧಾ ತಂದೆ ವಿಕಾಸ್ ವಾಕರ್ ಅವರ ಡಿಎನ್ ಎಗೆ ಹೋಲಿಕೆಯಾಗುತ್ತದೆ ಎಂಬುದು ಪರೀಕ್ಷಾ ವರದಿಯಲ್ಲಿ ತಿಳಿದುಬಂದಿದೆ.










